ಮಂಜೇಶ್ವರ: ನಾಲ್ಕು ದಶಕಗಳಿಂದ ಹಾವುಗಳ ರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವ ‘ಸ್ನೇಕ್ ಸುರೇಶ್’

ಮಂಜೇಶ್ವರ ತಾಲೂಕಿನ ಕುಂಬಳೆ ಕಂಚಿಕಟ್ಟೆ ನಿವಾಸಿ ಸುರೇಶ್, ಕಳೆದ ನಾಲ್ಕು ದಶಕಗಳಿಂದ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುವ ಮೂಲಕ ಅಪರೂಪದ ಸೇವೆ ಸಲ್ಲಿಸುತ್ತಿದ್ದಾರೆ. ಸ್ನೇಕ್ ಸುರೇಶ್ ಎಂದೇ ಜನಪ್ರಿಯರಾಗಿರುವ ಇವರು, ಇದುವರೆಗೆ ಸುಮಾರು ಮೂರುವರೆ ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದು ದಾಖಲೆಯೊಂದನ್ನು ನಿರ್ಮಿಸಿದ್ದಾರೆ.ಈವರೆಗೆ ಹಿಡಿದ ಹಾವುಗಳ ಪೈಕಿ ನಾಗರಹಾವುಗಳೇ ಅಧಿಕ ಎಂದು ಸುರೇಶ್ ತಿಳಿಸುತ್ತಾರೆ. ವಿಶೇಷವಾಗಿ ಕುಂಬಳೆ–ಬದಿಯಡ್ಕ ಪರಿಸರದಲ್ಲಿ ನಾಗರಹಾವುಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕೆ ನಿಖರ ಕಾರಣವೇನು ಎಂಬುದು ನನಗೂ ತಿಳಿದಿಲ್ಲ ಎಂದು ಅವರು ಹೇಳುವ ಮಾತುಗಳು ಕೇಳುಗರನ್ನು ಅಚ್ಚರಿಗೊಳಿಸುತ್ತವೆ.

ಎಳೆಯ ವಯಸ್ಸಿನಲ್ಲೇ ಕೆರೆಗಳಲ್ಲಿ ಕಪ್ಪೆ, ನೀರೊಳ್ಳೆಗಳನ್ನು ಹಿಡಿದು ಆಟವಾಡುತ್ತಿದ್ದ ಸುರೇಶ್, 15ನೇ ವಯಸ್ಸಿನಲ್ಲೇ ಹಾವು ಹಿಡಿಯುವ ಧೈರ್ಯ ತೋರಿದರು. ಬಳಿಕ ಸಾವಿರಾರು ಹಾವುಗಳನ್ನು ಹಿಡಿದು ಅವುಗಳನ್ನು ಕಾಡಿಗೆ ಬಿಡುವ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರು ಕೇರಳ ಅರಣ್ಯ ಇಲಾಖೆಯ ಅಧಿಕೃತ ಪರವಾನಗಿ ಪಡೆದ ಹಾವು ಹಿಡಿಯುವ ಸಿಬ್ಬಂದಿಯಾಗಿದ್ದಾರೆ.ಪರಿಸರದಲ್ಲಿ ಹಾವು ಕಾಣಿಸಿಕೊಂಡರೆ ಜನರು ಮೊದಲು ಕರೆ ಮಾಡುವ ವ್ಯಕ್ತಿಯೇ ಸುರೇಶ್. ಕರೆ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಹಾವು ಹಿಡಿದು, ಅದನ್ನು ಕಾಸರಗೋಡು ಅರಣ್ಯ ಇಲಾಖೆಗೆ ಒಪ್ಪಿಸುತ್ತಾರೆ. ಬಳಿಕ ಅರಣ್ಯ ಇಲಾಖೆ ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಡುತ್ತದೆ. ಈ ಸೇವೆಗೆ ಸುರೇಶ್ ಅವರಿಗೆ ಅರಣ್ಯ ಇಲಾಖೆಯಿಂದ ಯಾವುದೇ ಸಂಭಾವನೆ ಇಲ್ಲ. ಜನರು ನೀಡುವ ಸಹಾಯಧನವೇ ಇವರ ಸೇವೆಯ ಆಧಾರ.

ಜಿಲ್ಲೆಯಲ್ಲಿ ಹಾವು ಹಿಡಿಯುವ ಕಾರ್ಯದಲ್ಲಿ ತೊಡಗಿರುವ ಸುಮಾರು 175ಕ್ಕೂ ಹೆಚ್ಚು ಮಂದಿ ಇದ್ದರೂ, ಸುರೇಶ್ ಅವರ ಸೇವೆ ವಿಭಿನ್ನ ಮತ್ತು ಮಾನವೀಯವಾಗಿದೆ.ಗಾಯಗೊಂಡ ಹಾವುಗಳಿಗೆ ಚಿಕಿತ್ಸೆ ನೀಡುವುದೂ ಸುರೇಶ್ ಅವರ ವಿಶೇಷತೆ. ಒಮ್ಮೆ ತನ್ನೂರಿನಲ್ಲಿ ಗಾಯಗೊಂಡಿದ್ದ ನಾಗರಹಾವೊಂದನ್ನು ಮನೆಗೆ ತಂದು ವಾರಗಳ ಕಾಲ ಆರೈಕೆ ಮಾಡಿ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಟ್ಟಿದ್ದರು.
ಅದೇ ರೀತಿ, ಕಾಲು ಮುರಿದ ನವಿಲೊಂದನ್ನು ಮೃಗಾಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ಕೊಡಿಸಿ, ನಂತರ ವೈದ್ಯರ ಸಲಹೆಯಂತೆ ಮನೆಲ್ಲೇ ಆರೈಕೆ ಮಾಡಿ ಸಂಪೂರ್ಣ ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಡಲಾಗಿದೆ. ಹಲವಾರು ಪಕ್ಷಿಮರಿಗಳು ಇವರ ಕರುಣೆಯಿಂದ ಪುನರ್ಜನ್ಮ ಪಡೆದಿವೆ.

ಹಾವು ಹಿಡಿಯುವ ಸಂದರ್ಭದಲ್ಲಿ ಎದುರಾದ ಭೀಕರ ಘಟನೆಯೊಂದನ್ನು ಸುರೇಶ್ ನೆನಪಿಸುತ್ತಾರೆ. ಮನೆಯೊಂದಕ್ಕೆ ನುಗ್ಗಿದ್ದ ನಾಗರಹಾವನ್ನು ಹಿಡಿಯುವಾಗ ಅದು ಅವರ ಮೊಣಕೈ ಭಾಗಕ್ಕೆ ಕಚ್ಚಿತ್ತು. ವಿಷಪೂರಿತ ಕಡಿತದಿಂದ ಸ್ಥಿತಿ ಗಂಭೀರವಾಗಿ, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಬದುಕುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.ಆದರೆ ಉದ್ಯಮಿ ನಾರಾಯಣ ಪ್ರಭು ಅವರು ಸುಮಾರು 3 ಲಕ್ಷ ರೂ ವೆಚ್ಚದಲ್ಲಿ ಚಿಕಿತ್ಸೆ ಕೊಡಿಸಿದ ಪರಿಣಾಮ ಸುರೇಶ್ ಬದುಕುಳಿದರು. ಈಗ ನಾನು ಹಾವುಗಳ ಸಂಗದಲ್ಲೇ ಬದುಕುತ್ತೇನೆ ಎಂದು ಸುರೇಶ್ ಹೇಳುತ್ತಾರೆ.

ಹಾವು ಹಿಡಿಯುವ ಕಾರ್ಯದಲ್ಲಿ ಎಚ್ಚರಿಕೆ, ಏಕಾಗ್ರತೆ ಮತ್ತು ಅಪಾರ ತಾಳ್ಮೆ ಅತ್ಯಂತ ಅಗತ್ಯ ಎಂದು ಸುರೇಶ್ ಅಭಿಪ್ರಾಯಪಡುತ್ತಾರೆ. ಅರಣ್ಯ ಇಲಾಖೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದರೂ, ಇದುವರೆಗೆ ಅವರಿಗೆ ಮೂರು–ನಾಲ್ಕು ಬಾರಿ ಹಾವು ಕಚ್ಚಿದೆ. “ಕಾಸರಗೋಡು ಜನರಲ್ ಆಸ್ಪತ್ರೆಗೆ ಹೋದರೆ ತಕ್ಷಣ ಚಿಕಿತ್ಸೆ ಲಭ್ಯವಾಗುತ್ತದೆ” ಎಂದು ಅವರು ಹೇಳುತ್ತಾರೆ.

ಗೋಪಾಲಕೃಷ್ಣ–ಮೋಹಿನಿ ದಂಪತಿಯ ಐವರು ಮಕ್ಕಳಲ್ಲಿ ಹಿರಿಯರಾದ ಸುರೇಶ್, ಹಿಂದೆ ಮರದ ಕೆಲಸ ಮಾಡುತ್ತಿದ್ದರು. ಈಗ ಪೂರ್ಣಾವಧಿಯಾಗಿ ಹಾವು ಹಿಡಿಯುವುದೇ ಇವರ ಜೀವನೋಪಾಯ. ಕುಂಬಳೆ, ಬದಿಯಡ್ಕ, ಬಂದ್ಯೋಡ್, ಉಪ್ಪಳ ಪರಿಸರಗಳಲ್ಲಿ ಅನೇಕ ವಿಧದ ಹಾವುಗಳನ್ನು ಇವರು ಸೆರೆ ಹಿಡಿದಿದ್ದಾರೆ.ಈ ಕುರಿತು ಮಾತನಾಡಿದ ಕಾಸರಗೋಡು ಅರಣ್ಯಾಧಿಕಾರಿ ಸತ್ಯನ್, “ಕಾಸರಗೋಡು ಪ್ರದೇಶವು ಒಣಭೂಮಿ ಹಾಗೂ ಮುರಕಲ್ಲು ಪ್ರದೇಶವಾಗಿರುವುದರಿಂದ ಹಿಂದಿನಿಂದಲೂ ಇಲ್ಲಿ ನಾಗರಹಾವುಗಳ ಸಂಖ್ಯೆ ಅಧಿಕವಾಗಿತ್ತು. ಇತ್ತೀಚೆಗೆ ನವಿಲುಗಳ ಸಂಖ್ಯೆ ಹೆಚ್ಚಿದ ಕಾರಣ ನಾಗರಹಾವುಗಳ ಸಂಖ್ಯೆ ತುಸು ಕಡಿಮೆಯಾಗಿದೆ. ಪ್ರಕೃತಿ ಮತ್ತು ವಾತಾವರಣದ ಸಮತೋಲನಕ್ಕೆ ಹಾವುಗಳು ಅತ್ಯಂತ ಅಗತ್ಯ” ಎಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!