ಆರು ತಿಂಗಳಲ್ಲಿ ಕರ್ನಾಟಕ ವಿಧಾನಮಂಡಲ ಸಂಪೂರ್ಣ ಡಿಜಿಟಲ್: ಯು.ಟಿ. ಖಾದರ್

ಮಂಗಳೂರು: ಕರ್ನಾಟಕ ವಿಧಾನಮಂಡಲವನ್ನು ಸಂಪೂರ್ಣ ಡಿಜಿಟಲ್ ಮತ್ತು ಕಾಗದರಹಿತ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಂದಿನ ಆರು ತಿಂಗಳೊಳಗೆ ವಿಧಾನಸಭೆ ಹಾಗೂ ವಿಧಾನ ಪರಿಷತ್ತನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಲಾಗುವುದೆಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ತಿಳಿಸಿದರು .

ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಕರ್ನಾಟಕವು ದೇಶದ ಐಟಿ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಧಾನಮಂಡಲವೂ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಬೇಕಾದ ಅಗತ್ಯವಿದ್ದು ಆಧುನೀಕರಣದ ದೃಷ್ಟಿಯಿಂದ ಈ ಒಂದು ಮಹತ್ವದ ಹೆಜ್ಜೆಯನ್ನು ಇಡಲಾಗಿದೆ ಎಂದರು.

ವಿಧಾನಮಂಡಲವನ್ನು ಸಂಪೂರ್ಣ ಪೇಪರ್‌ಲೆಸ್ ಮಾಡಲು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ರಾಷ್ಟ್ರೀಯ ಇ-ವಿಧಾನ (NeVA – National e-Vidhan Application) ಯೋಜನೆಯನ್ನು ಅಳವಡಿಸಿಕೊಳ್ಳುವುದೇ ಅಥವಾ ರಾಜ್ಯದ ಸ್ವಂತ ಅಪ್ಲಿಕೇಶನ್ ಅಭಿವೃದ್ಧಿಪಡಿಸುವುದೇ ಎಂಬ ಕುರಿತು ಸವಿಸ್ತಾರ ಅಧ್ಯಯನ ನಡೆಸಲಾಗಿದೆ. ಎರಡೂ ಮಾದರಿಗಳ ವೆಚ್ಚ, ಅನುಕೂಲ ಹಾಗೂ ಅನಾನುಕೂಲಗಳ ಕುರಿತು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ವಿಧಾನ ಯೋಜನೆಗೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದ್ದು, ಈ ಸಂಬಂಧ ಕೇಂದ್ರ ಸಂಸದೀಯ ವ್ಯವಹಾರಗಳ ಇಲಾಖೆ ಹಾಗೂ ಕರ್ನಾಟಕ ವಿಧಾನಮಂಡಲದ ನಡುವೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲಾಗಿದೆ.ಯೋಜನೆಯಡಿ ಬೆಂಗಳೂರು ಹಾಗೂ ಬೆಳಗಾವಿಯ ವಿಧಾನಸಭಾ ಕಟ್ಟಡಗಳನ್ನು ಒಳಗೊಂಡಂತೆ ಸುಮಾರು 78 ಕೋಟಿ ರೂಪಾಯಿ ವೆಚ್ಚದಲ್ಲಿ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗುತ್ತಿದೆ. ವಿಧಾನ ಪರಿಷತ್ತಿಗೆ ಸಂಬಂಧಿಸಿದಂತೆ ಸುಮಾರು 52 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿ ಸಿದ್ಧಗೊಂಡಿದೆ ಎಂದರು .

.ಡಿಜಿಟಲೀಕರಣದ ಮೂಲಕ ಕಾಗದ, ಮುದ್ರಣ, ದಾಖಲೆ ಸಾಗಣೆ ಮತ್ತು ಇತರೆ ಆಡಳಿತಾತ್ಮಕ ವೆಚ್ಚಗಳಲ್ಲಿ ಗಣನೀಯ ಉಳಿತಾಯವಾಗಲಿದ್ದು, ಕೆಲವೇ ವರ್ಷಗಳಲ್ಲಿ ಯೋಜನೆಗೆ ಮಾಡಿದ ಹೂಡಿಕೆಯಷ್ಟೇ ಮೊತ್ತ ಉಳಿತಾಯವಾಗುವ ನಿರೀಕ್ಷೆಯಿದೆ. ಇದಲ್ಲದೆ, ಶಾಸಕರ ಹಾಜರಾತಿ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ತರಲಾಗುತ್ತಿದೆ. ಇದುವರೆಗೆ ಸಹಿ ಪುಸ್ತಕದ ಮೂಲಕ ಹಾಜರಾತಿ ದಾಖಲಿಸಲಾಗುತ್ತಿತ್ತು. ಹೊಸ ವ್ಯವಸ್ಥೆಯಲ್ಲಿ ಮೊಬೈಲ್ ಆಧಾರಿತ ಡಿಜಿಟಲ್ ಹಾಜರಾತಿ ವ್ಯವಸ್ಥೆ ಜಾರಿಗೆ ಬರಲಿದ್ದು, ಸದಸ್ಯರು ವಿಧಾನಮಂಡಲದೊಳಗಿನ ತಮ್ಮ ಆಸನದಲ್ಲೇ ಕುಳಿತು ಮೊಬೈಲ್ ಮೂಲಕ ಹಾಜರಾತಿ ದಾಖಲಿಸಬೇಕಾಗುತ್ತದೆ ಎಂದರು .

ಡಿಜಿಟಲ್ ವಿಧಾನಮಂಡಲದ ಪರಿಕಲ್ಪನೆ ಯಶಸ್ವಿಯಾಗಲು ಸದಸ್ಯರು ತಂತ್ರಜ್ಞಾನ ಬಳಕೆಗೆ ಹೊಂದಿಕೊಳ್ಳುವುದು ಅಗತ್ಯವಾಗಿದ್ದು, ಮೊಬೈಲ್ ಮತ್ತು ಇತರ ಡಿಜಿಟಲ್ ಸಾಧನಗಳ ಬಳಕೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ ಶಾಸಕರು ಇ-ಮೇಲ್, ದಾಖಲೆಗಳು ಹಾಗೂ ಸಭಾ ಮಾಹಿತಿಗಳನ್ನು ಸುಲಭವಾಗಿ ವೀಕ್ಷಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಡಿಜಿಟಲೀಕರಣ ಪೂರ್ಣಗೊಂಡ ಬಳಿಕ ವಿಧಾನಮಂಡಲದ ಕಾರ್ಯಚಟುವಟಿಕೆಗಳು ಮತ್ತಷ್ಟು ಪಾರದರ್ಶಕ, ವೇಗದ ಹಾಗೂ ಜನಸ್ನೇಹಿಯಾಗಲಿವೆ ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!