ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಜಲಜೀವನ್ ಮಿಷನ್: ಕೋಡಿ ಗ್ರಾಮಕ್ಕೆ ದಿನದ 24 ಗಂಟೆಯೂ ಕುಡಿಯುವ ನೀರು.!

ಉಡುಪಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಜಲಜೀವನ್ ಮಿಷನ್” ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಡಿ ಗ್ರಾಮ ಪಂಚಾಯತ್ ನಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಇದರಿಂದ ಗ್ರಾಮೀಣ ಭಾಗದ ಜನರ ಬಹುದಿನಗಳ ಕನಸೊಂದು ಈಡೇರಿದಂತಾಗಿದೆ.


ಗ್ರಾಮೀಣ ಭಾಗದಲ್ಲಿ ದಿನದ 24 ಗಂಟೆಯೂ ನೀರು ಸರಬರಾಜು ಮಾಡುವ ಪೈಲೆಟ್ ಪ್ರಾಜೆಕ್ಟ್ ಇದಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಆಯ್ಕೆಯಾದ ಏಕೈಕ ಗ್ರಾಮ ಪಂಚಾಯತ್ ಇದಾಗಿದೆ. ಈ ಮೂಲಕ ಕೋಡಿ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರನ್ನು ಪ್ರತಿಯೊಂದು ಮನೆಯ ಬಾಗಿಲಿಗೆ ಪೂರೈಸಿ ಮಾದರಿ ಗ್ರಾಮವಾಗಿ ರೂಪುಗೊಂಡಿದೆ.
ಗ್ರಾಮೀಣ ಭಾಗದ ಪ್ರತಿ ಮನೆಗೆ ನಿರಂತರ ನೀರು ಪೂರೈಕೆ ಮಾಡುವ ಉದ್ದೇಶದಿಂದ ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಯೋಗದಲ್ಲಿ ಜಲಜೀವನ್ ಮಿಷನ್ ಕಾರ್ಯಾರಂಭ ಮಾಡಿದೆ.

ಕರಾವಳಿಯ ಭೂಗರ್ಭದಲ್ಲಿ ಜಲಮಟ್ಟದ ಕುಸಿತ, ಉಪ್ಪುನೀರು ಪ್ರವೇಶ ಹಾಗೂ ಮಳೆಗಾಲದಲ್ಲಿ ನೀರಿನ ಮಾಲಿನ್ಯ ಸಮಸ್ಯೆಗಳು ಗಂಭೀರವಾಗಿರುವುದರಿಂದ ಕೋಡಿ ಗ್ರಾಮವನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಲಾಗಿದೆ. ಕೋಡಿ ಗ್ರಾಮದ ಸುತ್ತಲೂ ಸಮುದ್ರ ಹಾಗೂ ನದಿ ತೀರ ಇರುವುದರಿಂದ ಬಾವಿಗಳಲ್ಲಿ ಉಪ್ಪು ನೀರು ಬರುವ ಮೂಲಕ ಕುಡಿಯುವ ನೀರಿಗೆ ಪಂಚಾಯತ್ ನೀರನ್ನೇ ಅವಲಂಬಿಸಬೇಕಾಗಿತ್ತು. ಈ ಹಿಂದೆ ಎರಡು ದಿನಕ್ಕೊಮ್ಮೆ ಪಂಚಾಯತ್ ನೀರನ್ನು ಪೂರೈಸಲಾಗುತ್ತಿದ್ದು, ಇದರಿಂದ ಮಹಿಳೆಯರು ಹಾಗೂ ಮಕ್ಕಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.

ಹೀಗಾಗಿ ಗ್ರಾಮೀಣ ಜನರಿಗೆ ನಿರಂತರ ಶುದ್ಧ ನೀರು ಪೂರೈಕೆ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ನಳ್ಳಿನೀರು ಸಂಪರ್ಕ ಕಲ್ಪಿಸಿರುವ ಪ್ರತಿ ಮನೆಗೆ ಮೀಟರ್ ಅಳವಡಿಸಿ, ನೀರು ಬಳಕೆಯ ಮಾಪನ ಆಧಾರದಲ್ಲಿ ಶುಲ್ಕವನ್ನು ಸಂಗ್ರಹಿಸುವುದು, ಆ ಮೂಲಕ ನೀರಿನ ಅಪವ್ಯಯವನ್ನು ತಪ್ಪಿಸುವುದು ಕೂಡ ಇದರ ಉದ್ದೇಶವಾಗಿದೆ.
ಟ್ಯಾಂಕ್ ನೀರಿನ ಮೋಟಾರ್ ಚಾಲನೆಗೆ ಕೂಡ ಡಿಜಿಟಲ್ ಸ್ಪರ್ಶ ನೀಡಲಾಗಿದ್ದು, ಮೊಬೈಲ್ ಮೂಲಕ ಪಂಪಿನ ನಿರ್ವಹಣೆ, ಮೊಬೈಲ್ ನಲ್ಲಿ ಇದಕ್ಕೆಂದೇ ಅಳವಡಿಸಿಕೊಂಡ ಆ್ಯಪ್ ಮೂಲಕ ಗ್ರಾಹಕರು ಬಳಸಿದ ನೀರಿನ ಆಧಾರದಲ್ಲಿ ವಿದ್ಯುತ್ ಬಿಲ್ ರೀತಿಯ ಪ್ರಿಂಟ್ ಬಿಲ್ ನೀಡಲಾಗುತ್ತಿದೆ.

ಈ ಎಲ್ಲಾ ಮಾಹಿತಿಗಳು ಗ್ರಾಮ ಪಂಚಾಯತ್ ಕಂಪ್ಯೂಟರ್ ಗೆ ಏಕ ಕಾಲದಲ್ಲಿ ರವಾನೆಯಾಗುವುದರಿಂದ ಪಾರದರ್ಶಕವಾದ ವ್ಯವಸ್ಥೆ ಇದಾಗಿದೆ. ನೀರಿನ ಅಡಚಣೆ ಹಾಗೂ ಇನ್ನಿತರ ಮಾಹಿತಿಯನ್ನು ಮೊಬೈಲ್ ಮೂಲಕ ನೀಡಲಾಗುತ್ತಿದೆ. ಡಿಜಿಟಲ್ ಬಿಲ್ ವ್ಯವಸ್ಥೆ ಜಾರಿಯಾದ ನಂತರ ನೂರು ಶೇಕಡಾ ಹಣ ವಸೂಲಾತಿಯೊಂದಿಗೆ, ನೀರು ಮಿತವ್ಯಯವಾಗಿ ಬಳಕೆಯಾಗುತ್ತಿದ್ದು, ಪೋಲಾಗುವುದು ತಪ್ಪಿದೆ. ಈ ಕಾರಣದಿಂದ ನೀರು ಶೇಖರಣೆ ಹೆಚ್ಚಾಗಿ ದಿನದ 24 ಗಂಟೆ ನೀರಿನ ಪೂರೈಕೆ ಮಾಡುವುದು ಸುಲಭವಾಗಿದೆ.


ಒಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಯೋಗದೊಂದಿಗೆ ಕೋಡಿ ಗ್ರಾಮವು ನಿರಂತರ ಕುಡಿಯುವ ನೀರನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಜಲಜೀವನ್ ಮಿಷನ್ ವಿಸ್ತರಿಸಲು ಪ್ರೇರಣೆ ದೊರಕಿದೆ. ಈ ಯಶಸ್ಸಿನಿಂದ ಕರಾವಳಿ ತೀರದ ಪ್ರದೇಶಗಳಿಗೆ ಶಾಶ್ವತ ನೀರಿನ ಭದ್ರತೆಯ ಭರವಸೆ ಮೂಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!