ಕೊಳ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಮಕ್ಕಳ, ಮಹಿಳಾ ಹಾಗೂ ಅಂಗವಿಕಲರ ಗ್ರಾಮಸಭೆ ಫೆಬ್ರವರಿ 22ರಂದು ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಅಶ್ರಫ್ ಕೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಮಕ್ಕಳ ಗ್ರಾಮಸಭೆಯ ಅಧ್ಯಕ್ಷತೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಿಬೈಲಿನ ವಿದ್ಯಾರ್ಥಿನಿ ಅಪ್ರಾ ವಹಿಸಿಕೊಂಡು ಗಮನಸೆಳೆದರು. ಸಭೆಗೆ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.
ಸಭೆಯಲ್ಲಿ ಮಕ್ಕಳಿಂದ ತಮ್ಮ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ, ಶೈಕ್ಷಣಿಕ ಸೌಲಭ್ಯಗಳು ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪಂಚಾಯತ್ ಪ್ರತಿನಿಧಿಗಳು, ಮಕ್ಕಳ ಅಭಿಪ್ರಾಯಗಳು ಗ್ರಾಮಾಭಿವೃದ್ಧಿಗೆ ಮಾರ್ಗದರ್ಶಕವಾಗಿವೆ ಎಂದು ತಿಳಿಸಿದರು. ಇದೇ ವೇಳೆ, ಹಿಂದಿನ ಗ್ರಾಮಸಭೆಯಲ್ಲಿ ಸಲ್ಲಿಸಿದ ಬೇಡಿಕೆಗಳನ್ನು ಪಂಚಾಯತ್ ಈಡೇರಿಸಿದ್ದಕ್ಕಾಗಿ ಮಕ್ಕಳು ಹಾಗೂ ಸಾರ್ವಜನಿಕರು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ, ಸದಸ್ಯರಾದ ಜಯಂತಿ ಎಸ್. ಪೂಜಾರಿ, ಶ್ರೀಮತಿ ಲವೀನಾ ಪೆರಾವೋ, ಸುಲೋಚನ ರೈ, ಶ್ರೀಮತಿ ಸೌಮ್ಯಲತಾ, ಶ್ರೀಮತಿ ಅನಿತಾ ಶೆಟ್ಟಿಗಾರ್, ರತ್ನಾ ಕುಳಾಲು, ಅಬ್ದುಲ್ ಹಮೀದ್ ಸುರಿಬೈಲ್, ಪ್ರಶಾಂತ್ ಶೆಟ್ಟಿ, ಹರೀಶ್ ಟೈಲರ್ ಉಪಸ್ಥಿತರಿದ್ದರು. ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ರೇಣುಕಾ ಹಾಗೂ ಪ್ರಶಾಂತ್ ಬಂಟ್ವಾಳ್,ವಿವಿಧ ಶಾಲೆಯ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಅವರು ಸಭೆಯನ್ನು ಸ್ವಾಗತಿಸಿ, ಪಂಚಾಯತ್ ವತಿಯಿಂದ ಕೈಗೊಳ್ಳಲಾಗಿರುವ ಹಾಗೂ ಮುಂದಿನ ದಿನಗಳಲ್ಲಿ ಅನುಷ್ಠಾನಗೊಳ್ಳಲಿರುವ ಅಭಿವೃದ್ಧಿ ಕಾರ್ಯಗಳ ಕುರಿತು ವಿವರಿಸಿದರು. ಸಭೆಯ ಅಂತ್ಯದಲ್ಲಿ ಅವರು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.