ಉಳ್ಳಾಲ: ಕಣಚೂರು ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗ ಹಾಗೂ ಚರ್ಮರೋಗ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ಚರ್ಮರೋಗಶಾಸ್ತ್ರ ವಿಷಯದ ಕುರಿತ ವಿಶೇಷ ನಿರಂತರ ವೈದ್ಯಕೀಯ ಶಿಕ್ಷಣ ಸಮ್ಮೇಳನವನ್ನು ಜೂನ್ 13ರ ಶನಿವಾರದಂದು ಬೆಳಿಗ್ಗೆ 9 ಗಂಟೆಗೆ ಕಣಚೂರು ವೈದ್ಯಕೀಯ ಕಾಲೇಜಿನ ಕಾನ್ಫರೆನ್ಸ್ ಡ್ರೋಮ್ ಹಾಲ್ ನಲ್ಲಿ ಆಯೋಜಿಸಲಾಗಿದೆ ಎಂದು ಪ್ರೊಫೆಸರ್ ಎಮೆರಿಟಸ್ ಡಾ. ಶಂಶಾದ್ ಎ. ಖಾನ್ ತಿಳಿಸಿದ್ದಾರೆ.
ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.30ಕ್ಕೆ ನಡೆಯಲಿದ್ದು, ಸಂಸ್ಥೆಯ ಅಧ್ಯಕ್ಷ ಡಾ. ಯು.ಕೆ. ಮೋನು ಉದ್ಘಾಟನೆ ನೆರವೇರಿಸಲಿದ್ದಾರೆ. ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡೀನ್ ಡಾ. ಶಹನವಾಜ್ ಮಾಣಿಪ್ಪಾಡಿ, ವೈದ್ಯಕೀಯ ಅಧೀಕ್ಷಕ ಡಾ. ಅಂಜನ್ ಕುಮಾರ್, ಆರೋಗ್ಯ ವಿಜ್ಞಾನ ಸಲಹಾ ಮಂಡಳಿಯ ಅಧ್ಯಕ್ಷ ಡಾ. ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಕೌನ್ಸಿಲ್ ಸದಸ್ಯ ಡಾ. ಎಂ.ವಿ. ಪ್ರಭು ಹಾಗೂ ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಎಸ್. ಮೋನಿಸ್ ಉಪಸ್ಥಿತರಿರಲಿದ್ದಾರೆ.
ಮಕ್ಕಳಲ್ಲಿ ಕಂಡುಬರುವ ಚರ್ಮ ಸಂಬಂಧಿತ ಕಾಯಿಲೆಗಳು ಒಟ್ಟು ಮಕ್ಕಳ ವೈದ್ಯಕೀಯ ಪ್ರಕರಣಗಳಲ್ಲಿ ಸುಮಾರು ಶೇ.10ರಷ್ಟಿದ್ದು, ಅವುಗಳ ತಡೆ, ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ವೈದ್ಯರಿಗೆ ಇತ್ತೀಚಿನ ಮಾಹಿತಿ ಹಾಗೂ ನವೀನ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಮಕ್ಕಳ ಚರ್ಮರೋಗಗಳ ಇತ್ತೀಚಿನ ಚಿಕಿತ್ಸಾ ವಿಧಾನಗಳು, ರೋಗನಿರ್ಣಯ ತಂತ್ರಜ್ಞಾನಗಳು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳ ಕುರಿತು ತಜ್ಞರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ಹಾಗೂ ಮಣಿಪಾಲದ ಖ್ಯಾತ ಚರ್ಮರೋಗ ತಜ್ಞರು ಮತ್ತು ಅನುಭವಿ ವೈದ್ಯಕೀಯ ಅಧ್ಯಾಪಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಉಪನ್ಯಾಸ ಹಾಗೂ ಸಂವಾದಾತ್ಮಕ ಚರ್ಚೆಗಳನ್ನು ನಡೆಸಲಿದ್ದಾರೆ.
ಕಾರ್ಯಕ್ರಮವನ್ನು ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಓನಿಯಲ್ ಫೆರ್ನಾಂಡಿಸ್ ಹಾಗೂ ಚರ್ಮರೋಗ ವಿಭಾಗದ ಮುಖ್ಯಸ್ಥೆ ಡಾ. ಶ್ರುತಕೀರ್ತಿ ಡಿ. ಶೆಣೈ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದು, ಸಹಾಯಕ ಪ್ರಾಧ್ಯಾಪಕ ಡಾ. ಚೇತನ್ ಎಸ್. ಟಂಡೆಲ್ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಖಾನ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಓನಿಯಲ್ ಫೆರ್ನಾಂಡಿಸ್ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ. ಚೇತನ್ ಎಸ್. ಟಂಡೆಲ್ ಉಪಸ್ಥಿತರಿದ್ದರು.