ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಇಲಾಖೆಗೆ ದೂರು

ಬಂಟ್ವಾಳ, ಜೂ.10: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪ್ರದೇಶದಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆಯಲಾಗುತ್ತಿದ್ದು, ಅದರ ಸಾಗಾಟವೂ ನಡೆಯುತ್ತಿದೆ ಎಂದು ಆರೋಪಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗಣೇಶ್ ನಾಯಕ್ ಅವರು ಪೊಲೀಸ್ ಇಲಾಖೆಗೆ ದೂರು ನೀಡಿದ್ದಾರೆ.

ಪಾಣೆಮಂಗಳೂರಿನ ನೇತ್ರಾವತಿ ನದಿಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಸಲಾಗುತ್ತಿರುವ ದೋಣಿಗಳು ನಿಲ್ಲಿಸಲಾಗಿದ್ದು, ಈಗಾಗಲೇ ಅಕ್ರಮವಾಗಿ ತೆಗೆಯಲಾದ ಹತ್ತಕ್ಕೂ ಅಧಿಕ ಮರಳು ಲೋಡ್‌ಗಳನ್ನು ದಾಸ್ತಾನು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪಾಣೆಮಂಗಳೂರು ಸೇತುವೆ ಹಾಗೂ ರೈಲ್ವೆ ಸೇತುವೆಯಿಂದ ಕೂಗಳತೆಯ ಅಂತರದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಣೇಶ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆಯು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಈಗಾಗಲೇ ಲಿಖಿತ ಮಾಹಿತಿ ನೀಡಿದ್ದು, ಇಲಾಖೆಯ ವರದಿ ಬಂದ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಅಕ್ರಮ ಮರಳುಗಾರಿಕೆಯಿಂದ ಪರಿಸರ ಮತ್ತು ನದಿಯ ಸ್ವಾಭಾವಿಕ ಹರಿವಿಗೆ ಹಾನಿಯಾಗುವ ಸಾಧ್ಯತೆ ಇರುವುದರಿಂದ ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!