ಮಂಜೇಶ್ವರ :ಗಣರಾಜ್ಯೋತ್ಸವದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ‘ಶುಚಿತ್ವ ಮಂಜೇಶ್ವರ’ ಟೌನ್ ಕ್ಲೀನಿಂಗ್ ಅಭಿಯಾನಕ್ಕೆ ಚಾಲನೆ ದೊರಕಿತು.ಜನಪ್ರತಿನಿಧಿಗಳು, ಪಂಚಾಯತು ಅಧಿಕಾರಿಗಳು, ರಾಜಕೀಯ ನೇತಾರರು, ಯುವಜನ ಸಂಘಟನೆಗಳು, ಫ್ಲ್ಯಾಟ್ ಅಸೋಸಿಯೇಷನ್ಗಳು, ಸ್ವಯಂಸೇವಕ ಸಂಘಟನೆಗಳು, ಹಸಿರು ಕರ್ಮಸೇನೆ, ಉದ್ಯೋಗ ಖಾತರಿ ಯೋಜನೆ ಕಾರ್ಮಿಕರು, ಕುಟುಂಬಶ್ರೀ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅಭಿಯಾನಕ್ಕೆ ಚಾಲನೆ ದೊರಕಿತು.
ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡ್ನಲ್ಲಿ ನಡೆದ ಕಾರ್ಯಕ್ರಮವನ್ನು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಯ್ಯಿದ್ ಸೈಫುಲ್ಲಾ ತಂಙಲ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ಬಸೀರ್ ಕನಿಲ ಅಧ್ಯಕ್ಷತೆ ವಹಿಸಿದರು.ಅಧ್ಯಕ್ಷತೆ ವಹಿಸಿದ ಬಶೀರ್ ಕನಿಲ ಮಾತನಾಡಿ : ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಒಂದು ಅಭ್ಯಾಸವಾಗಿದೆ. ಆದರೆ ನಮ್ಮ ಅಧಿಕಾರದಲ್ಲಿ ಇದಕ್ಕೆ ಅವಕಾಶ ಕೊಡದೆ ಯಾರ ಮುಖವನ್ನು ಕೂಡಾ ನೋಡದೆ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ ಅವರು ಭರವಸೆ ನೀಡಿದರು.
ಅದೇ ರೀತಿ ಸೈಫುಲ್ಲಾ ತಂಘಲ್ ಮಾತನಾಡಿ : ಈ ಸಲ ನಾವು ಅಧಿಕಾರಕ್ಕೆ ಬರುವಾಗ ಮಂಜೇಶ್ವರವನ್ನು ಮಾಲಿನ್ಯ ಮುಕ್ತ ನಗರವನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದೇವೆ. ಅದನ್ನು ಖಂಡಿತ ಈಡೇರಿಸಲಿರುವುದಾಗಿ ಅವರು ಹೇಳಿದರು.
ಅದೇ ರೀತಿ ಪಂಚಾಯತು ಕಾರ್ಯದರ್ಶಿ ಮಾತನಾಡಿ : ಮಂಜೇಶ್ವರವನ್ನು ಒಂದು ಸುಂದರ ನಗರವನ್ನಾಗಿ ಮಾಡಲು ಆಡಳಿತ ಸಮತಿ ತೀರ್ಮಾನಿಸಿದೆ. ಅದಕ್ಕೆ ಊರಿನವರ ಪೂರ್ಣ ಸಹಕಾರ ಅತೀ ಅಗತ್ಯ ಎಂದು ಹೇಳಿದರುಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ, ಪಿಡಬ್ಲ್ಯುಡಿ ರಸ್ತೆಗಳು ಹಾಗೂ ಜಲಾಶಯಗಳಲ್ಲಿ ತ್ಯಾಜ್ಯ ಎಸೆಯುವ ಪ್ರವೃತ್ತಿ ತಡೆದು, ಮೂಲದಲ್ಲೇ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಜಾರಿಗೊಳಿಸುವ ಉದ್ದೇಶದೊಂದಿಗೆ ಮನೆಗಳು, ಹೋಟೆಲ್ಗಳು, ವ್ಯಾಪಾರ ಸಂಸ್ಥೆಗಳು ಹಾಗೂ ನಿವಾಸಿ ಫ್ಲ್ಯಾಟ್ಗಳಿಗೆ ಜಾಗೃತಿ ಮೂಡಿಸುವುದು ಅಭಿಯಾನದ ಗುರಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಾಗೂ ಇತರ ಸಾರ್ವಜನಿಕ ರಸ್ತೆಗಳಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ವೀಡಿಯೋ ಸೇರಿದಂತೆ ಸಾಕ್ಷ್ಯ ಸಂಗ್ರಹಿಸಲು ಜನಪರ ವಿಜಿಲೆನ್ಸ್ ಸ್ಕ್ವಾಡ್ಗಳನ್ನು ಸಕ್ರಿಯಗೊಳಿಸಲಾಗುವುದು. ಮಾಹಿತಿ ನೀಡುವವರಿಗೆ ದಂಡದ ಮೊತ್ತದಿಂದ ನಿಗದಿತ ಶೇಕಡಾವಾರು ಪುರಸ್ಕಾರ ನೀಡಲಾಗುವುದು ಎಂದು ಪಂಚಾಯತು ಅಧಿಕಾರಸ್ಥರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಎರಡನೇ ವಾರ್ಡ್ ಸದಸ್ಯ ಇಲ್ಯಾಸ್ ತೂಮಿನಾಡು, ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹನೀಫ್ ಕುಚ್ಚಿಕಾಡ್, ಪಂಚಾಯತ್ ಸದಸ್ಯರುಗಳು, ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಪಂಚಾಯತು ಅಧಿಕಾರಿಗಳು ಹಾಗೂ ಹಸಿರು ಕರ್ಮಸೇನೆ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.