ಮಂಗಳೂರು :ಇದು ಬರೀ ಉಕ್ಕಿನ ವಸ್ತುವಲ್ಲ, ಸೈನಿಕರ ಸಾಹಸಗಾಥೆಯ ಜೀವಂತ ಸಾಕ್ಷಿ, ಯುದ್ದದಲ್ಲಿ ಭಾಗಿಯಾದ ಯುದ್ದ ಟ್ಯಾಂಕ್ ಮಂಗಳೂರಿಗೆ ಬಂದಿದೆ. ಭಾರತದ ವಿಜಯಕ್ಕೆ ಸಾಕ್ಷಿಯಾಗಿ ನಿಂತಿದೆ.

1971ರ ಪಾಕಿಸ್ತಾನ ಯುದ್ಧದಲ್ಲಿ ಪಾಲ್ಗೊಂಡಿದ್ದಲ್ಲದೆ, ನಾಲ್ಕು ದಶಕ ಭಾರತೀಯ ಸೇನೆಗೆ ಸೇವೆ ನೀಡಿದ್ದ ಟಿ-55 ಯುದ್ಧ ಟ್ಯಾಂಕ್ ಮಂಗಳೂರು ನಗರದ ಕದ್ರಿಯ ಯುದ್ಧ ಸ್ಮಾರಕದ ಬಳಿ ಆದಿತ್ಯವಾರ ಅನಾವರಣಗೊಂಡಿತು.

ಇದೇ ವೇಳೆ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇದು ಕೇವಲ ಉಕ್ಕಿನ ವಸ್ತುವಲ್ಲ. ಬರೀ ಯಂತ್ರವೂ ಅಲ್ಲ. ಪ್ರದರ್ಶನಕ್ಕಿಟ್ಟಿರುವ ವಸ್ತುವೂ ಅಲ್ಲ. ಅಸಂಖ್ಯಾತ ಯೋಧರ ಸೇನಾ ಸಾಹಸದ ಜೀವಂತ ಸಾಕ್ಷಿ. ಇದಕ್ಕೆ ದೇವಸ್ಥಾನಕ್ಕೆ ಸಲ್ಲಿಸುವಷ್ಟೇ ಗೌರವ ಕೊಡಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಂಗಳೂರಿಗೆ ಮಿಗ್ 21 ರೀತಿಯ ಹಳೆಯ ಯುದ್ಧ ವಿಮಾನವೊಂದನ್ನು ತಂದು ಸ್ಮಾರಕವಾಗಿ ಇರಿಸುವ ಯೋಜನೆ ಇದೆ ಎಂದೂ ಹೇಳಿದರು.

21 ಸಾವಿರ ಅಡಿ ಎತ್ತರದಲ್ಲಿ ಸೈನಿಕ ರಾಕೆಟ್ ಲಾಂಚರ್ ಹಿಡಿದು ಸಾಗುವುದು, ಬೆನ್ನಿಗೆ 25 ಕಿಲೋ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗುವುದು ಸಾಮಾನ್ಯ ಸಂಗತಿಯಲ್ಲ. ಗಡಿಯಲ್ಲಿರುವ ಸೈನಿಕರಿಂದಾಗಿ ನಾವು ಭಯವಿಲ್ಲದೆ ನಿದ್ದೆ ಮಾಡುತ್ತಿದ್ದೇವೆ ಎನ್ನುವ ಅರಿವು ಜನಸಾಮಾನ್ಯರಿಗೆ ಬರಬೇಕು. ಗಡಿಯಲ್ಲಿರುವ ಯೋಧ ತನ್ನ ಎದೆಗೆ ಗುಂಡು ಹಾಕಿಸಿಕೊಂಡಿದ್ದಾನೆ ವಿನಾ ಯಾವುದೇ ನಾಗರಿಕನ ಬೆನ್ನಿಗೆ ಗುಂಡು ಬಿದ್ದಿಲ್ಲ. ನಮ್ಮ ನಾಳೆಗಳಿಗಾಗಿ ಯೋಧರು ತಮ್ಮ ಜೀವನ ಅರ್ಪಿಸಿದ್ದಾರೆ. ಹೀಗಾಗಿ ಮಂಗಳೂರಿನ ಹೆಗ್ಗುರುತಾಗಿ ಈ ಸ್ಥಳವನ್ನು ಅಭಿವೃದ್ಧಿಪಡಿಸುವ ಯೋಜನೆ ಇದೆ. ಪ್ರತಿಯೊಬ್ಬ ನಾಗರಿಕನೂ ಇಲ್ಲಿ ಬಂದು ಒಂದಷ್ಟು ಹೊತ್ತು ಕುಳಿತು ಸೈನಿಕರಿಗೆ ಗೌರವ ಸಲ್ಲಿಸುವಂತೆ ಆಗಬೇಕು ಎಂದು ಹೇಳಿದರು.

