ಮಂಗಳೂರು: ದೇಶಾದ್ಯಂತ “ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನಾ ಕಾರ್ಯಕ್ರಮವು ಜನವರಿ 30 ರಿಂದ ಫೆಬ್ರವರಿ 13 ವರೆಗೆ ನಡೆಯಲ್ಲಿದ್ದು ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಕುಷ್ಠರೋಗದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ವರ್ಷದ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ-2026 ಕಾರ್ಯಕ್ರಮವನ್ನು ಗ್ರಾಮೀಣ ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ಕಾರ್ಯಕ್ರಮದಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಸಮುದಾಯದ ಮನೆ ಬಾಗಿಲಿಗೆ ಕುಷ್ಠರೋಗದ ಬಗ್ಗೆ ಮಾಹಿತಿ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕುಷ್ಟರೋಗದ ಬಗ್ಗೆ ಇರುವ ಸಾಮಾಜಿಕ ಕಳಂಕ ಮತ್ತು ಸಾಮಾಜಿಕ ತಾರತಮ್ಯಗಳನ್ನು ನಿವಾರಿಸುವ ಜೊತೆಗೆ ಶೀಘ್ರ ಕುಷ್ಠರೋಗಿಗಳ ಪತ್ತೆ ಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆ ನೀಡುವುದು ಈ ಅಭಿಯಾನದ ಮೂಲ ಉದ್ದೇಶವಾಗಿದೆ ಎಂದರು.
“ತಾರತಮ್ಯವನ್ನು ಕೊನೆಗೊಳಿಸುವುದು, ಘನತೆಯನ್ನು ಕಾಪಾಡುವುದು”ಎಂಬ ಈ ವರ್ಷದ ಘೋಷಣೆಯ ಬಗ್ಗೆ ಸಾಕಷ್ಟು ಪ್ರಚಾರ ನೀಡಿ ಸಾರ್ವಜನಿಕರಿಗೆ ಕುಷ್ಠರೋಗದ ಬಗ್ಗೆ ಮಾಹಿತಿ ನೀಡಲಾಗುವುದೆಂದು ತಿಳಿಸಿದರು.
ಗ್ರಾಮ ಮಟ್ಟದಲ್ಲಿ ಈ ರೋಗದ ಬಗ್ಗೆ ಅರಿವನ್ನು ಮೂಡಿಸಲಾಗುವುದು. ಕುಷ್ಟ ರೋಗ ಗುಣವಾಗದ ರೋಗವಲ್ಲ ಅದಕ್ಕೆ ಸೂಕ್ತವಾದ ಚಿಕಿತ್ಸೆ ಸಿಕ್ಕಿದಲ್ಲಿ ಅದು ಗುಣವಾಗುತ್ತದೆ.
ರೋಗದ ಲಕ್ಷಣಗಳಾದ
ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು.ಕೈಕಾಲುಗಳಲ್ಲಿ ಜೋಮು ಉಂಟಾಗುವುದು ಮತ್ತು ಮರಗಟ್ಟುವುದು.ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿದಂತೆ ಚರ್ಮ ಕಾಣಿಸುವುದು.ನರಗಳ ಊತವಾಗುವಿಕೆ. (ನ್ಯೂರೈಟಿಸ್) ದೇಹದಲ್ಲಿ ಇಂತಹಾ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತವಾದ ಪರೀಕ್ಷೆಯನ್ನು ಮಾಡಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ 47 ಕುಷ್ಟ ರೋಗಿಗಳು ಪತ್ತೆಯಾಗಿದ್ದು ಅವರಿಗೆ ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾ ಇದ್ದಾರೆ ಎಂದರು.