ತೊಕ್ಕೊಟ್ಟು:ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಗಣ್ಯರೆಡೆಗೆ ಬೊಂಬೆ ನಡಿಗೆ’ ಪರಿಕಲ್ಪನೆಗೆ ಇದೇ ಫೆಬ್ರವರಿ 2ರಂದು ಸಂಜೆ 6 ಗಂಟೆಗೆ ಧರ್ಮಸ್ಥಳ ಶ್ರೀ ಕ್ಷೇತ್ರದ ಮುಂಭಾಗದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿದ್ಯುಕ್ತ ಚಾಲನೆ ನೀಡಲಿದ್ದು ಅದೇ ಸಂದರ್ಭದಲ್ಲಿ ಯಕ್ಷಗಾನ ಬೊಂಬೆಯಾಟ ಪ್ರದರ್ಶನವನ್ನು ಆಯೋಜಿಸಿರುವುದಾಗಿ ಕಾಸರಗೋಡು ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘದ ನಿರ್ದೇಶಕ, ಪ್ರಧಾನ ಸೂತ್ರಧಾರಿ ಕೆ. ವಿ. ರಮೇಶ ತಿಳಿಸಿದ್ದಾರೆ.
ತೊಕ್ಕೊಟ್ಟು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,ತೆಂಕುತಿಟ್ಟು ಯಕ್ಷಗಾನವನ್ನು ಬೊಂಬೆಯಾಟದ ಮೂಲಕ ಪ್ರದರ್ಶಿಸುತ್ತಿರುವ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘವು ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮೂಲಕ ವಿಶ್ವದ ಗಮನ ಸೆಳೆದಿದೆ.
2030ರಲ್ಲಿ ಸಂಸ್ಥೆಯ ಸುವರ್ಣ ಮಹೋತ್ಸವ ಜರಗಲಿದ್ದು ಚಂದ್ರಗಿರಿ ತೀರದ ಯಕ್ಷಪುತ್ಥಳಿ ಬೊಂಬೆಮನೆಯಲ್ಲಿ ಸಾವಿರ ಬೊಂಬೆಗಳ ಮ್ಯೂಸಿಯಂ ಪ್ರಗತಿ ಪಥದಲ್ಲಿದೆ ಎಂದರು. ವಿದ್ಯಾರ್ಥಿ-ಯುವಜನರಿಗೆ ಬೊಂಬೆಯಾಟ ತರಬೇತಿ ನೀಡಲಾಗುತ್ತಿದ್ದು ಈಗಾಗಲೇ ನೂರಕ್ಕೂ ಹೆಚ್ಚು ಮಂದಿ ಸಮರ್ಥ ಕಲಾವಿದರಾಗಿ ಹೊರ ಹೊಮ್ಮಿದ್ದಾರೆ.
‘ಚಿಣ್ಣರ ಅಂಗಳಕ್ಕೆ ಪುತ್ಥಳಿ ಯಾತ್ರೆ’ ಮತ್ತು ‘ಶಾಲೆಯತ್ತ ಬೊಂಬೆ ಚಿತ್ರ’ ಯೋಜನೆಗಳು ಸಾಕಾರಗೊಂಡು ಸಾವಿರಾರು ವಿದ್ಯಾರ್ಥಿಗಳು ಈ ಕಲಾಪ್ರಕಾರವನ್ನು ಕಂಡು ಆಕರ್ಷಿತರಾಗಿದ್ದಾರೆ. ಸಂಸ್ಥೆಯು ದೇಶವಿದೇಶಗಳಲ್ಲಿ ಸಂಚರಿಸಿ ಯಕ್ಷಗಾನದ ಮಹತ್ವವನ್ನು ಬೊಂಬೆಯಾಟದ ಮೂಲಕ ಎತ್ತಿ ಹಿಡಿದು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದುಕೊಂಡಿದೆ .ಇದೊಂದು ಹೆಮ್ಮೆಯ ಸಂಸ್ಥೆ ಎಂದರು. ಇದೇ ಸಂದರ್ಭ ಬೊಂಬೆಯಾಟ ಪ್ರಾತ್ಯಕ್ಷಿಕೆ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ರಾಧಾಕೃಷ್ಣ ಉಳಿಯತಡ್ಕ, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ಕಾಸರಗೋಡು ಜಿಲ್ಲಾ ಕನ್ನಡ ಜಾಗೃತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ಜಗದೀಶ್ ಕೂಡ್ಲು, ಎಸ್. ಎಲ್ ಭಾರದ್ವಾಜ್ ಹಾಗೂ ಅಚಲ್ ಭಟ್ ಉಪಸ್ಥಿತರಿದ್ದರು.