ಚಿನ್ನದ ದರ ಏರಿಕೆಯ ಹೊಡೆತ ಕಂಬಳಕ್ಕೂ: ಬಹುಮಾನ ಚಿನ್ನದ ವೆಚ್ಚದಿಂದ ಸಂಘಟಕರಿಗೆ ಭಾರ

ಮಂಗಳೂರು :ಚಿನ್ನದ ದರ ಏರಿಕೆಯ ಹೊಡೆತ ಕರಾವಳಿಯ ಕಂಬಳಕ್ಕೂ ತಟ್ಟತೊಡಗಿದೆ.ತುಳುನಾಡಿನ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಗುರುತಿಸುವಂತಹ ಕಂಬಳಕ್ಕೂ ಇದೀಗ ಚಿನ್ನದ ದರ ಏರಿಕೆಯ ನೇರ ಪರಿಣಾಮ ತಟ್ಟಿದೆ. ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ನಾಗಾಲೋಟದಂತೆ ಏರಿಕೆಯಾಗುತ್ತಿದ್ದು, ಇದರ ಹೊರೆ ಕಂಬಳ ಕೂಟಗಳ ಮೇಲೂ ಹೆಚ್ಚಾಗಿದೆ. ಸದ್ಯ ಚಿನ್ನದ ದರ ಇಳಿಕೆಯ ಯಾವುದೇ ಲಕ್ಷಣಗಳು ಕಾಣಿಸದೇ ಇರುವ ಹಿನ್ನೆಲೆಯಲ್ಲಿ, ಭವಿಷ್ಯದಲ್ಲಿ ಇನ್ನಷ್ಟು ಏರಿಕೆ ಸಂಭವಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಇದರ ಪರಿಣಾಮವಾಗಿ ಕಂಬಳ ಸಂಘಟಕರಿಗೆ ಬಹುಮಾನವಾಗಿ ನೀಡಬೇಕಾದ ಚಿನ್ನದ ವೆಚ್ಚ ಭಾರವಾಗುತ್ತಿದೆ.

ಈ ಕುರಿತು ಮಾತನಾಡಿದ ಕಂಬಳ ಸಮಿತಿಯ ಅಧ್ಯಕ್ಷ ಐಕಳಬಾವಾ ದೇವಿಪ್ರಸಾದ್ ಶೆಟ್ಟಿ, “ಕಂಬಳಕ್ಕೂ ಚಿನ್ನಕ್ಕೂ ಅವಿನಾಭಾವ ಸಂಬಂಧವಿದೆ. ಕಂಬಳ ಕೋಣಗಳ ಯಜಮಾನರು ತಮ್ಮ ಕೋಣಗಳನ್ನು ಮಕ್ಕಳಂತೆ ಸಾಕಿ, ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಾರೆ. ಅವರ ಗುರಿ ಕಂಬಳ ಕೂಟದಲ್ಲಿ ಚಿನ್ನದ ಪದಕ ಗೆಲ್ಲುವುದೇ ಆಗಿರುತ್ತದೆ. ಆದ್ದರಿಂದ ಎಷ್ಟೇ ಕಷ್ಟವಾದರೂ ಕಂಬಳದಲ್ಲಿ ಚಿನ್ನದ ಪದಕ ನೀಡುವುದು ನಮ್ಮ ಕರ್ತವ್ಯ” ಎಂದು ಹೇಳುತ್ತಾರೆ.

ಕಂಬಳ ಓಟದ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಕೋಣಗಳಿಗೆ ಒಂದು ಪವನ್ ಚಿನ್ನದ ಪದಕ ಹಾಗೂ ದ್ವಿತೀಯ ಸ್ಥಾನ ಪಡೆದ ಕೋಣಗಳಿಗೆ ಅರ್ಧ ಪವನ್ ಚಿನ್ನದ ಪದಕವನ್ನು ಬಹುಮಾನವಾಗಿ ನೀಡುವ ಪದ್ಧತಿ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸುತ್ತಾರೆ.

“ಚಿನ್ನದ ದರ ಏರಿಕೆಯ ನಡುವೆಯೂ ಈ ಸಂಪ್ರದಾಯವನ್ನು ಮುಂದುವರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ” ಎನ್ನುತ್ತಾರೆ ಅವರು.

ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದ ಅವರು, “ಬಜೆಟ್‌ನಲ್ಲಿ ಕಂಬಳಕ್ಕೆ ಐದು ಕೋಟಿ ರೂಪಾಯಿ ಅನುದಾನವನ್ನು ಮೀಸಲಿಡಬೇಕು. ಒಂದು ಕಂಬಳ ಕೂಟವನ್ನು ಆಯೋಜಿಸಲು 40ರಿಂದ 50 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಇದರೊಂದಿಗೆ ಈಗ ಚಿನ್ನದ ಹೊರೆಯೂ ಹೆಚ್ಚಾಗಿದೆ” ಎನ್ನುತ್ತಾರೆ.

ಕಂಬಳದ ಆರ್ಥಿಕ ಹೊರೆ ತಗ್ಗಿಸುವ ಉದ್ದೇಶದಿಂದ ಐಪಿಎಲ್ ಮಾದರಿಯಲ್ಲಿ ಮೆಗಾ ಸ್ಪಾನ್ಸರ್‌ಗಳನ್ನು ಕರೆತರಲು ಚಿಂತನೆ ನಡೆಸಲಾಗುತ್ತಿದೆ. “ಕರಾವಳಿ ಭಾಗದ ಜೊತೆಗೆ ಬೆಂಗಳೂರು, ಮುಂಬೈ ಹಾಗೂ ದುಬೈಯ ಉದ್ಯಮಿಗಳನ್ನು ಮೆಗಾ ಸ್ಪಾನ್ಸರ್‌ಗಳಾಗಿ ಬಳಸಿಕೊಳ್ಳುವ ಯೋಜನೆ ಇದೆ. ಮುಂದಿನ ವರ್ಷದಿಂದಲೇ ಇದನ್ನು ಕಾರ್ಯಗತಗೊಳಿಸಲು ತಯಾರಿ ನಡೆಸಿದ್ದೇವೆ” ಎನ್ನುತ್ತಾರೆ ಅವರು.

SHARE
Loading spinner

Leave a Reply

Your email address will not be published. Required fields are marked *

error: Content is protected !!