ಫೆ.11ರಿಂದ 14ರ ತನಕ ಕದಿಕೆ ಹಳೆಯಂಗಡಿ ಹರ್ಝತ್ ಸೈಯದ್ ಮೌಲಾನವಲಿಯುಲ್ಲಾಹಿ ದರ್ಗಾದಲ್ಲಿ ಸಂಭ್ರಮದ ಉರೂಸ್ ಆಚರಣೆ

ಮಂಗಳೂರು:ಕದಿಕೆ ಹಳೆಯಂಗಡಿಯ ಹಝತ್ ಸೈಯದ್ ಮೌಲಾನವಲಿಯುಲ್ಲಾಹಿ (ಖ.ಸಿ) ದರ್ಗಾ ಶರೀಫ್ ಇದರ ವಾರ್ಷಿಕ ಉರೂಸ್ ಸಮಾರಂಭವು ಫೆಬ್ರವರಿ 11ರಿಂದ 14ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ಉರೂಸ್ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ತಿಳಿಸಿದ್ದಾರೆ.ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ನಡೆಯುವ ಉರೂಸ್ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನಗಳು, ಸ್ವಲಾತ್ ಮಜ್ಜಿಸ್, ಸಂದಲ್ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಉರೂಸ್ ಉದ್ಘಾಟನಾ ಸಮಾರಂಭವು ಫೆಬ್ರವರಿ 11ರ ಬುಧವಾರ ಸಂಜೆ 7 ಗಂಟೆಗೆ ನಡೆಯಲಿದ್ದು, ಹಾಜಿ ಅಬ್ದುಲ್ ರಹಿಮಾನ್ ಕುಡುಂಬೂರು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್ ಹಾಜ್ ಮಹಮ್ಮದ್ ಅಝರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನ ನೀಡಲಿದ್ದು, ಬದ್ರಿಯ ಜುಮಾ ಮಸೀದಿ, ಸಾಗ್ ಖತೀಬರಾದ ಬಹು. ಇ.ಯಂ. ಅಬ್ದುಲ್ಲಮದನಿ ಉದ್ಘಾಟನೆ ನೆರವೇರಿಸಲಿದ್ದಾರೆ. ಸ್ವಾಗತ ಭಾಷಣವನ್ನು ಕೇಂದ್ರ ಜುಮಾ ಮಸೀದಿ ಕದಿಕೆ ಖತೀಬರಾದ ಬಹು. ಪಿ.ಎ. ಅಬ್ದುಲ್ಲ ಝನಿ ಬಡಗನ್ನೂರು ಅವರು ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಬಹು. ಡಾ. ಐ. ಅಬ್ದುಲ್ ಕಾದರ್ ದಾರಿಮಿ ಕುಕ್ಕಿಲ ಅವರು ಮತ ಪ್ರವಚನ ನೀಡಲಿದ್ದಾರೆ.

ಈ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಲೋಕಸಭಾ ಸದಸ್ಯ ಕ್ಯಾಪ್ಟನ್ ಬೃಜೇಶ್ ಚೌಟ, ಶಾಸಕರು ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಅಭಯಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂ‌ರ್, ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜ, ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಸೇರಿದಂತೆ ಹಲವು ಗಣ್ಯರು, ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ನೇತಾರರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿಯ ಉಪಾಧ್ಯಕ್ಷ ಅಶ್ರಫ್ ಪಡುತೋಟ, ಕಾರ್ಯದರ್ಶಿಗಳಾದ ಎಚ್.ಕೆ. ಮಹಮ್ಮದ್ ಹಾಗೂ ಪಕ್ರುದ್ದೀನ್, ಪ್ರಚಾರ ಸಮಿತಿ ಅಧ್ಯಕ್ಷ ಜಮಾಲುದ್ದೀನ್ ಕದಿಕೆ ಮತ್ತು ಸಂದಲ್ ಉಸ್ತುವರು ಕಾದರ್ ಕೋಡಿಕಲ್ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!