ಮಂಜೇಶ್ವರ: ಕುಂಬಳೆಯ ಉದ್ಯಮಿ ವಿಕ್ರಮ್ ಪೈ ವಿರುದ್ಧ ಕೊಲೆ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪೊಸತ್ತಡ್ಕದಲ್ಲಿರುವ ಅವರ ಆಕ್ರೋ ಡೈರಿ ಫಾರ್ಮ್‌ಗೆ ಸಂಪರ್ಕಿಸುವ ಖಾಸಗಿ ಕಾಂಕ್ರೀಟ್ ರಸ್ತೆಯಲ್ಲಿ ಕಾರಿನ ಚಕ್ರ ಹತ್ತಿದ ತಕ್ಷಣ ಸ್ಫೋಟ ಸಂಭವಿಸಿ ವಾಹನಕ್ಕೆ ಹಾನಿಯಾಗಿದೆ. ಟಯರ್ ಸಂಪೂರ್ಣ ನಾಶವಾಗಿ, ಕಾರಿನ ಅಡಿಭಾಗ ಜಜ್ಜುಗುಜ್ಜಾಗಿದೆ. ಭಾರೀ ಶಬ್ದ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿತು. ಅದೃಷ್ಟವಶಾತ್ ವಿಕ್ರಮ್ ಪೈ ಅಪಾಯದಿಂದ ಪಾರಾಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕವಾಗಿ ಇದು ಕಾಡುಹಂದಿಯನ್ನು ಕೊಲ್ಲಲು ಇಡಲಾಗುವ ಪಟಾಕಿ ಇರಬಹುದೆಂದು ಶಂಕಿಸಲಾಗಿದೆ. ಆದರೆ ಖಾಸಗಿ ರಸ್ತೆ ಹಾಗೂ ಬೆಳಕಿನ ವ್ಯವಸ್ಥೆಯಿರುವ ಪ್ರದೇಶಕ್ಕೆ ಅದು ಹೇಗೆ ತಲುಪಿತು ಎಂಬುದು ಅನುಮಾನ ಹುಟ್ಟಿಸಿದೆ. ಪೊಸತ್ತಡ್ಕದಲ್ಲಿ ಈ ರೀತಿಯ ಘಟನೆ ಮೊದಲ ಬಾರಿಗೆ ಸಂಭವಿಸಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಸ್ಫೋಟಕ ಅವಶಿಷ್ಟಗಳನ್ನು ಸಂಗ್ರಹಿಸಿರುವ ವಿಕ್ರಮ್ ಪೈ ಸ್ವಂತ ಖರ್ಚಿನಲ್ಲಿ ಪರೀಕ್ಷೆಗೆ ಕಳುಹಿಸುವುದಾಗಿ ತಿಳಿಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.