ಮೀಯಪದವು: ಇಲ್ಲಿನ ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವು ಫೆಬ್ರವರಿ 13ರ ಶುಕ್ರವಾರದಂದು ಶಾಲಾ ರಾಮಕೃಷ್ಣ ರಾವ್ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಬೆಳಿಗ್ಗೆ 9.30ಕ್ಕೆ ಶಾಲಾ ಸಂಚಾಲಕಿ ಶ್ರೀಮತಿ ಎಂ. ರಾಜೇಶ್ವರಿ ಎಸ್. ರಾವ್ ಧ್ವಜಾರೋಹಣ ನೆರವೇರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ಶಾಲಾ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇರಿದವು.
ಮಧ್ಯಾಹ್ನ ಊಟದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಗಳಾದ ಶ್ರೀ ಜೋರ್ಜ್ ಕ್ರಾಸ್ತಾ ಸಿ. ಎಚ್. ಅವರು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲಾ ಆಡಳಿತ ಸಲಹೆಗಾರರಾದ ಶ್ರೀಧರ ರಾವ್ ಆರ್ ಎಮ್ ಸ್ವಾಗತದೊಂದಿಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮುಖ್ಯೋಪಾಧ್ಯಾಯರಾದ ಶ್ರೀ ಅರವಿಂದಾಕ್ಷ ಭಂಡಾರಿಯವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಾಗೂ ವಿಜ್ಞಾನ ವಿಭಾಗದ ನಿರ್ದೇಶಕ ರಾದ ಡಾ. ನಾರಾಯಣ ಭಟ್ ಮರುವಳ ಮಾತನಾಡಿ ವಿದ್ಯಾಭ್ಯಾಸದಿಂದ ಮಕ್ಕಳು ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶಾಲಾ ನಿವೃತ್ತ ಅಧ್ಯಾಪಕರಾದ ಶ್ರೀ ಜೋಕಿ ಮೊಂತೆರೋ ಅವರನ್ನು ಗಣ್ಯರ ಸಮಕ್ಷಮದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿತರ ಪರಿಚಯವನ್ನು ಶಾಲಾ ಅಧ್ಯಾಪಕರಾದ ಹರೀಶ್ ಸುಲಾಯ ಒಡ್ಡoಬೆಟ್ಟು ವಾಚಿಸಿದರು. ಸನ್ಮಾನಿತರು ತಮ್ಮ ಶಾಲಾ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು.
ಮಂಜೇಶ್ವರ ಬಿ.ಆರ್.ಸಿ ಯೋಜನಾಧಿಕಾರಿ ಶ್ರೀ ರಾಜಗೋಪಾಲ್ ಪಿ,
ಶಾಲಾ ಸಂಚಾಲಕಿ ರಾಜೇಶ್ವರಿ ಎಸ್ ರಾವ್, ಪಿಟಿಎ ಅಧ್ಯಕ್ಷರಾದ ಜಗದೀಶ್ ಸಿ ಶೆಟ್ಟಿಗಾರ್ ಹಾಗೂ ಎಂ ಪಿ ಟಿ ಎ ಅಧ್ಯಕ್ಷೆ ಆಶ್ಲೇಷ ಜಿ ರಾವ್ ಕಾರ್ಯಕ್ರಮಕ್ಕೆ ಶುಭ ಕೋರಿದರು.ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ಸ್ಪರ್ಧೆಗಳ ಹಾಗೂ ಪ್ರತೀ ತರಗತಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಳೆದ ವರ್ಷ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ದಿ.ಗೋಪಾಲಕೃಷ್ಣ ರಾವ್ ಸ್ಮರಣಾರ್ಥ ಹಾಗೂ ದಿ.ದುಗ್ಗಣ್ಣ ಭಟ್ ಸ್ಮರಣಾರ್ಥ ನೀಡುವ ಧನಸಹಾಯವನ್ನು ನೀಡಲಾಯಿತು.ಈ ಕಾರ್ಯಕ್ರಮವನ್ನು ಅಧ್ಯಾಪಕಿ ದಿವ್ಯಶ್ರೀ ಕೆ ನಡೆಸಿಕೊಟ್ಟರು.ಸಭಾ ಕಾರ್ಯಕ್ರಮವನ್ನು ಶಾಲಾ ಅಧ್ಯಾಪಕರಾದ ಕೃಷ್ಣ ಶರ್ಮ ಕೆ ನಿರೂಪಿಸಿ ಅಧ್ಯಾಪಕರಾದ ರಾಮಚಂದ್ರ ಕೆ ಎಂ ವಂದಿಸಿದರು.ಸಭಾ ಕಾರ್ಯಕ್ರಮದ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರಿದವು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಸಿಬಿಐ ಸೇತುರಾಮ್ ಅಯ್ಯರ್ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಘ್ನೇಶ.ಎಸ್ ಹಾಗೂ ವಿದ್ಯಾರ್ಥಿಗಳು ನಿರ್ವಹಿಸಿದರು.