ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಕೇಂದ್ರ ಸರ್ಕಾರದ ವಿರುದ್ಧ ಎನ್‌ಎಸ್‌ಯುಐ ಆಕ್ರೋಶ

ಮಂಗಳೂರು: ನೀಟ್ (NEET) ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಗೆ ದೊಡ್ಡ ಹೊಡೆತವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಅಭಿಷೇಕ್ ಉಳ್ಳಾಲ ಮಾತನಾಡಿ, “ಸಾಮಾನ್ಯ ವಿಚಾರಗಳಿಗೂ ಬೀದಿಗಿಳಿದು ಪ್ರತಿಭಟನೆ ನಡೆಸುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಇಂದು ಮೌನ ವಹಿಸಿರುವುದು ಅರ್ಥವಾಗದ ಸಂಗತಿ. ಪ್ರಶ್ನೆಪತ್ರಿಕೆ ಸೋರಿಕೆಯಿಂದ ಭವಿಷ್ಯ ಕತ್ತಲಾದ ಕಾರಣ ನಾಲ್ಕಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿದ್ದರೂ ಬಿಜೆಪಿ ಹಾಗೂ ಎಬಿವಿಪಿ ನಾಯಕರು ಒಂದು ಮಾತನ್ನೂ ಆಡುತ್ತಿಲ್ಲ,” ಎಂದು ಆರೋಪಿಸಿದರು.

“2014ರ ಮೊದಲು ರಾಜ್ಯ ಮಟ್ಟದಲ್ಲಿ ಸಿಇಟಿ ಪರೀಕ್ಷೆಗಳ ಮೂಲಕವೇ ವೈದ್ಯಕೀಯ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಆದರೆ 2016ರಿಂದ ಕೇಂದ್ರ ಸರ್ಕಾರ ನೀಟ್ ಪರೀಕ್ಷೆಯನ್ನು ಜಾರಿಗೆ ತಂದ ಬಳಿಕ ಕಳೆದ ಹತ್ತು ವರ್ಷಗಳಲ್ಲಿ ಐದುಕ್ಕಿಂತ ಹೆಚ್ಚು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇದರಿಂದ ಕೇಂದ್ರ ಸರ್ಕಾರದ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವೇ ಪ್ರಶ್ನಾರ್ಥಕವಾಗಿದೆ,” ಎಂದು ಟೀಕಿಸಿದರು.

“ಬೀಡಿ ಕಾರ್ಮಿಕರು, ರಿಕ್ಷಾ ಚಾಲಕರು, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಬಡ ಕುಟುಂಬಗಳ ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ರಾತ್ರಿ ಹಗಲು ದುಡಿದು ಶಿಕ್ಷಣ ಕೊಡಿಸುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ಭವಿಷ್ಯ ಹಾಳಾಗಿದೆ ಎಂಬ ಆತಂಕದಿಂದ ಆತ್ಮಹತ್ಯೆಗೆ ಶರಣಾಗುತ್ತಿರುವುದು ಅತ್ಯಂತ ದುಃಖಕರ ಸಂಗತಿ. ಈ ನೋವನ್ನು ರಾಜಕೀಯದ ದೃಷ್ಟಿಯಿಂದ ನೋಡಬಾರದು,” ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ರಾಜಸ್ಥಾನ ಬಿಜೆಪಿ ಯುವ ಮೋರ್ಚಾ ಸದಸ್ಯ ದಿನೇಶ್ ಎಂಬಾತ ಭಾಗಿಯಾಗಿರುವ ಕುರಿತು ತನಿಖೆ ನಡೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, “15 ಲಕ್ಷ ರೂ. ಪಡೆದು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಾಗಿದ್ದರೆ ತಮ್ಮದೇ ಪಕ್ಷದವರ ವಿರುದ್ಧ ಕೇಂದ್ರ ಸರ್ಕಾರ ಯಾವ ಶಿಸ್ತು ಕ್ರಮ ಕೈಗೊಂಡಿದೆ?” ಎಂದು ಪ್ರಶ್ನಿಸಿದರು.

ಪ್ರೈವೇಟ್ ಟ್ಯುಟೋರಿಯಲ್‌ಗಳು ಹಾಗೂ ಕೋಚಿಂಗ್ ಕೇಂದ್ರಗಳ ಮೂಲಕ ಪ್ರಶ್ನೆಪತ್ರಿಕೆ ಮಾರಾಟದ ಜಾಲ ನಿರ್ಮಾಣವಾಗುತ್ತಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಯಬೇಕು,” ಎಂದು ಆಗ್ರಹಿಸಿದರು.

ರಾಜಸ್ಥಾನದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ಕುಟುಂಬಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆರವು ನೀಡಿರುವುದನ್ನು ಉಲ್ಲೇಖಿಸಿದ ಅವರು, “ಆ ಕುಟುಂಬದ ಶಿಕ್ಷಣ ಸಾಲವನ್ನು ಭರಿಸುವ ಭರವಸೆ ನೀಡಲಾಗಿದೆ. ಅದೇ ರೀತಿ, ಕೇಂದ್ರ ಸರ್ಕಾರವೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ಘೋಷಿಸಬೇಕು,” ಎಂದು ಒತ್ತಾಯಿಸಿದರು.

“ಸುಮಾರು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶದ ಜನರ ಬಳಿ ಕ್ಷಮೆ ಕೇಳಿ, ಸಂತ್ರಸ್ತ ಕುಟುಂಬಗಳಿಗೆ ಸಮರ್ಪಕ ಪರಿಹಾರ ನೀಡಬೇಕು,” ಎಂದು ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಆಗ್ರಹಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಎನ್‌ಎಸ್‌ಯುಐ ಅಧ್ಯಕ್ಷ ಸುಹಾನ್ ಆಳ್ವ, ಪ್ರಮುಖರಾದ ಕೀರ್ತನ್, ಸಾಹೇಲ್, ಯು.ಟಿ. ಫರೀದ್, ಸೋಹನ್ ಹಾಗೂ ಸಂತೋಷ್ ಸುಳ್ಯ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!