ಬಿಲ್ಡರ್‌ ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್‌ಐಆರ್‌ ದಾಖಲು ಸತ್ಯಕ್ಕೆ ಸಿಕ್ಕ ವಿಜಯ : ಉಜಿರೆ ತನುಷ್ ಶೆಟ್ಟಿ

ಮಂಗಳೂರಿನ ಬಿಲ್ಡರ್ ಜಿತೇಂದ್ರ ಕೊಟ್ಟಾರಿ ಮತ್ತು ಉಜಿರೆ ನಿವಾಸಿ ತನುಷ್ ಶೆಟ್ಟಿ ನಡುವಿನ ‘ರೋಡ್ ರೇಜ್’ ವಿವಾದ ಹೊಸ ತಿರುವು ಪಡೆದಿದೆ. ಒಂದೂವರೆ ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ, ಬಿಲ್ಡರ್ ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿರುವುದು ಸಂತಸ ತಂದಿದ್ದು ಇದು ನ್ಯಾಯಕ್ಕೆ ಸಿಕ್ಕ ಜಯ ಎಂದು ತನುಷ್ ಶೆಟ್ಟಿ ಹೇಳಿದ್ದಾರೆ.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 9, 2024 ರಂದು ಮಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ಮುಗಿಸಿ ಹಿಂತಿರುಗುತ್ತಿದ್ದಾಗ ಬಜ್ಪೆ ಬಳಿ ಜಿತೇಂದ್ರ ಕೊಟ್ಟಾರಿ ವೇಗವಾಗಿ ಕಾರು ಚಲಾಯಿಸಿ ತಮ್ಮ ಕಾರಿಗೆ ಢಿಕ್ಕಿ ಹೊಡೆಯುವಂತೆ ಬಂದಿದ್ದರು. ಇದನ್ನು ಪ್ರಶ್ನಿಸಲು ಹೋದಾಗ, ಕೊಟ್ಟಾರಿ ಅವರು ಗನ್ ತೆಗೆದು ಬೆದರಿಕೆ ಹಾಕಿದ್ದಾರೆ ಎಂದು ತನುಷ್ ಆರೋಪಿಸಿದ್ದಾರೆ.”ನಾವು ಹಾರ್ನ್ ಹಾಕಿ ಗಾಡಿ ನಿಲ್ಲಿಸಲು ಹೇಳಿದಾಗ ಕೊಟ್ಟಾರಿ ನಿಲ್ಲಿಸಲಿಲ್ಲ. ಕದ್ರಿ ಬಳಿ ಅವರ ಮನೆ ಹತ್ತಿರ ಹೋದಾಗ, ಅವರು ತಾವು ದೊಡ್ಡ ಬಿಲ್ಡರ್ ಎಂದು ಕೂಗಾಡಿ ಗನ್ ತೆಗೆದರು. ಅವರ ಮಗಳು ಕೂಡ ‘ಇವರನ್ನು ಶೂಟ್ ಮಾಡಿ ಸಾಯಿಸಿ’ ಎಂದು ಕಿರುಚಾಡುತ್ತಿದ್ದಳು. ನಾವು ಆತ್ಮರಕ್ಷಣೆಗಾಗಿ ಅವರ ಕೈಯಲ್ಲಿದ್ದ ಗನ್ ಮತ್ತು ಕಂಬಳದ ಬೆತ್ತವನ್ನು ಕೆಳಗೆ ಬೀಳಿಸಿದೆವು ಎಂದು ತನುಷ್ ಹೇಳಿದರು

ಈ ಪ್ರಕರಣದಲ್ಲಿ ಜಿತೇಂದ್ರ ಕೊಟ್ಟಾರಿ ಅವರು ಅತ್ಯಂತ ಕೆಳಮಟ್ಟದ ರಾಜಕೀಯ ಮಾಡಿದ್ದಾರೆ ಎಂದು ತನುಷ್ ಆಕ್ರೋಶ ವ್ಯಕ್ತಪಡಿಸಿದರು. “ತಮ್ಮ ಮೇಲಿನ ಕೇಸ್ ಗಟ್ಟಿಗೊಳಿಸಲು ಕೊಟ್ಟಾರಿಯವರು ಸ್ವಂತ ಮಗಳನ್ನೇ ಬಳಸಿಕೊಂಡು ನನ್ನ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ ಬೆದರಿಕೆಯಂತಹ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ಒಬ್ಬ ತಂದೆಯಾಗಿ ಮಗಳನ್ನು ಇಂತಹ ಕೆಲಸಕ್ಕೆ ಬಳಸುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ,” ಎಂದು ಅವರು ಕಿಡಿಕಾರಿದರು.ಅಂದು ಪೊಲೀಸರು ನನ್ನ ಹೇಳಿಕೆಯನ್ನು ಪಡೆಯದೆ, ಕೌಂಟರ್ ಕೇಸ್ ದಾಖಲಿಸಲು ಅವಕಾಶ ನೀಡದೆ ಏಕಪಕ್ಷೀಯವಾಗಿ ನಡೆದುಕೊಂಡಿದ್ದರು.ಎಸ್‌ಐ ರೇಖಾ ಅವರ ಮುಂದೆಯೇ ಜಿತೇಂದ್ರ ಕೊಟ್ಟಾರಿ ಅವರು ನಿನ್ನನ್ನು ಸಾಯುವ ತನಕ ಎನಿಮಿಯಾಗಿ ನೋಡಿ ಲೈಫ್ ಹಾಳು ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದರು. ಪೊಲೀಸರು ನನ್ನನ್ನು ರಾತ್ರೋರಾತ್ರಿ ಲಾಕಪ್‌ನಲ್ಲಿ ಕೂರಿಸಿ, ಮರುದಿನ ಜೈಲಿಗೆ ಕಳುಹಿಸಿದರು. ಜೈಲಿನಲ್ಲೂ ನನಗೆ ಜೀವಭಯವಿದ್ದ ಕಾರಣ ವಿಶೇಷ ಭದ್ರತೆ ನೀಡಲಾಗಿತ್ತು,” ಎಂದು ತನುಷ್ ನೋವು ತೋಡಿಕೊಂಡರು.

15 ದಿನಗಳ ಬಳಿಕ ಜೈಲಿನಿಂದ ಹೊರಬಂದ ನಂತರ ನಾನು ನ್ಯಾಯಾಲಯದ ಮೊರೆ ಹೋಗಿದ್ದೆ. ಘಟನೆ ನಡೆದು ಒಂದೂವರೆ ವರ್ಷದ ನಂತರ, ಈಗ ನ್ಯಾಯಾಲಯವು ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಿರುವುದು ನನಗೆ ಸಂತಸ ತಂದಿದೆ. ಈಗ ಕೋರ್ಟ್ ತೆಗೆದುಕೊಂಡ ನಿರ್ಧಾರದಿಂದ ನನಗೆ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದು ಅವರು ತಿಳಿಸಿದರು.

ಈ ಇಡೀ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾದರೆ ಪಾರದರ್ಶಕ ತನಿಖೆಯ ಅಗತ್ಯವಿದೆ. ಘಟನೆ ನಡೆದ ಬಗ್ಗೆ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳು, ಗಲಾಟೆ ನಡೆದ ಸ್ಥಳದ ಲೈವ್ ಫುಟೇಜ್ ಮತ್ತು ಪೊಲೀಸ್ ಠಾಣೆಯ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಬಹಿರಂಗಪಡಿಸಬೇಕು. ಬೆದರಿಕೆ ಹಾಕಲು ಬಳಸಲಾದ ಬಂದೂಕನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಬೇಕು ಮತ್ತು ಸಲ್ಲಿಕೆಯಾಗಿರುವ ವೈದ್ಯಕೀಯ ವರದಿಗಳ ಸಮಯವನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಪ್ರಭಾವಿ ಬಿಲ್ಡರ್ ಪರವಾಗಿ ತನಿಖೆ ವಾಲದಂತೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಜೊತೆಗಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!