ಬಂಟ್ವಾಳ ತಾಲ್ಲೂಕಿನ ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೀವನ್ ಪಿಂಟೋ ಅವರು ಮೊನ್ನೆ ರಾತ್ರಿ ಭಾರೀ ಮಳೆಯ ನಡುವೆ ಮನೆಯಿಂದ ಸ್ವಲ್ಪ ದೂರದಲ್ಲಿರುವ ತಮ್ಮ ಮಾವನ ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿಯಲ್ಲಿದ್ದ ನೀರಿನ ತೋಡಿಗೆ ನಿರ್ಮಿಸಿದ್ದ ಕಾಲುಸಂಕ ದಾಟುವಾಗ ಕಾಲು ಜಾರಿ ಹರಿಯುತ್ತಿದ್ದ ನೀರಿಗೆ ಬಿದ್ದು ಕೊಚ್ಚಿ ಹೋಗಿದ್ದರು.

ಘಟನೆ ಬಳಿಕ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದು, ನಿನ್ನೆ ದಿನವಿಡೀ ಎನ್ಡಿಆರ್ಎಫ್ ತಂಡವೂ ತೀವ್ರ ಶೋಧ ನಡೆಸಿತ್ತು. ಘಟನಾ ಸ್ಥಳದ ಸಮೀಪ ಜೀವನ್ ಅವರ ಟಾರ್ಚ್ ಹಾಗೂ ಚಪ್ಪಲಿ ಪತ್ತೆಯಾಗಿದ್ದವು.


ಇಂದು ಶೋಧ ಕಾರ್ಯ ಮುಂದುವರಿಸಿದ ಎನ್ಡಿಆರ್ಎಫ್ ತಂಡ, ಬಂಟ್ವಾಳದ ಸಂಗಬೆಟ್ಟು ಪ್ರದೇಶದಲ್ಲಿ ಜೀವನ್ ಪಿಂಟೋ ಅವರ ಮೃತದೇಹವನ್ನು ಪತ್ತೆಹಚ್ಚಿದೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


