ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 40ನೇ ಕೋರ್ಟ್ ವಾರ್ಡ್‌ನ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಎದುರು ರಿಕ್ಷಾ ಮಾಲಕ-ಚಾಲಕರ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯ ಮೇರೆಗೆ ₹18 ಲಕ್ಷ ವಿಶೇಷ ಅನುದಾನದಲ್ಲಿ ಆಟೋ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿತು. ಶಾಸಕ ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಶಿಲಾನ್ಯಾಸದ ಬಳಿಕ ಮಾತನಾಡಿದ ಶಾಸಕರು, ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಮೇಲ್ಛಾವಣಿಯಿಂದ ರಿಕ್ಷಾ ಚಾಲಕರು ಉರಿ ಬಿಸಿಲು ಹಾಗೂ ಮಳೆಗಾಲದಲ್ಲಿ ಆಶ್ರಯ ಪಡೆಯಲು ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಇಲ್ಲಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ರೈಲ್ವೆ ಇಲಾಖೆಯ ಅನುಮತಿ ಕಡ್ಡಾಯವಾಗಿದ್ದು, ಈ ನಿಟ್ಟಿನಲ್ಲಿ ಮನವಿಗೆ ಸಂಪೂರ್ಣ ಸಹಕಾರ ನೀಡಿದ ರೈಲ್ವೆ ಅಧಿಕಾರಿ ಯಾಧವ್ ಅವರಿಗೆ ಶಾಸಕರು ವಿಶೇಷ ಧನ್ಯವಾದ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಇಲ್ಲಿ ಕುಡಿಯುವ ಶುದ್ಧ ನೀರಿನ ಘಟಕವನ್ನೂ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ಲಲ್ಲೇಶ್ ಕುಮಾರ್, ಅನಿಲ್ ಹೊಯ್ಗೆ ಬಜಾರ್, ದಯಾನಂದ್, ಸುಶೀಲ್, ನೆಲ್ಸನ್, ಮಂಜುನಾಥ್, ಶರಣ್, ಮೋಹನ್ ಸೇರಿದಂತೆ ಸ್ಥಳೀಯ ನಿವಾಸಿಗಳು ಹಾಗೂ ವಾರ್ಡ್ ಕಾರ್ಯಕರ್ತರು ಉಪಸ್ಥಿತರಿದ್ದರು.