ಕಾಸರಗೋಡು:ಶಬರಿಮಲೆ ಶ್ರೀ ಅಯ್ಯಪ್ಪ ದೇವಾಲಯ ಚಿನ್ನ ಹಗರಣ ಪ್ರಕರಣದಲ್ಲಿ ದೇವಾಲಯದ ತಂತ್ರಿಯಾಗಿರುವ ಕಂಠರರ್ ರಾಜೀವರ್ ಅವರಿಗೆ ಮಾನ್ಯ ನ್ಯಾಯಾಲಯ ಜಾಮೀನು ನೀಡಿದ್ದು, ಅವರ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವುದನ್ನು ಸಚ್ಚಿದಾನಂದ ಭಾರತಿ ಸ್ವಾಮಿಗಳು ಸ್ವಾಗತಿಸಿದ್ದಾರೆ.
ಅವರು ಈ ಬಗ್ಗೆ ಶ್ರೀಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹಿಂದೂ ದೇವಾಲಯ ಪರಂಪರೆಯ ರಕ್ಷಕರಾಗಿರುವ ತಂತ್ರಿಗಳು ಕೇವಲ ವ್ಯಕ್ತಿಗಳಷ್ಟೇ ಅಲ್ಲ; ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಿಕೊಂಡು ಬಂದ ದೈವಿಕ ಹಾಗೂ ಅಧ್ಯಾತ್ಮಿಕ ಜವಾಬ್ದಾರಿಯ ಪ್ರತೀಕರಾಗಿದ್ದಾರೆ. ಅಂಥ ಸ್ಥಾನದಲ್ಲಿರುವ ವ್ಯಕ್ತಿಯನ್ನು ಸಾಕ್ಷ್ಯ ಯಾ ಪುರಾವೆಗಳಿಲ್ಲದೆ ಪ್ರಕರಣದಲ್ಲಿ ಆರೋಪಿಯಾಗಿ ಮಾಡುವುದು ಮತ್ತು ಬಂಧಿಸುವುದು ಸರಿಯಲ್ಲ ಕೇವಲ ಕಾನೂನಿನ ಮೇಲಿರುವ ನಂಬಿಕೆ ಮಾತ್ರವಲ್ಲ ಕೋಟ್ಯಾಂತರ ಭಕ್ತರ ಹಿಂದೂ ಧರ್ಮದ ಬಗ್ಗೆ ಇರುವ ನಂಬಿಕೆಯನ್ನೂ ಗಂಭೀರವಾಗಿ ಹಾನಿಗೊಳಿಸುವ ಕ್ರಮವಾಗಿದೆ. ಇದು ಭಕ್ತರ ನಂಬಿಕೆಗೆ ಗಾಯ ಮಾಡುವುದಕ್ಕೆ ಸಮಾನವಾಗಿದೆ ಎಂದು ಶ್ರೀಗಳು ನುಡಿದರು.
ಕಾನೂನು ಪ್ರಕ್ರಿಯೆಗಳ ಮೂಲಕ ಸತ್ಯ ಹೊರಬರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ದೇವಾಲಯಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ತನಿಖಾ ಸಂಸ್ಥೆಗಳು ಹೆಚ್ಚು ಜಾಗರೂಕತೆ ಹಾಗೂ ಸಂಯಮವನ್ನು ಪಾಲಿಸಬೇಕಾಗಿದೆ. ಶಬರಿಮಲೆ ಪ್ರಕರಣದಲ್ಲಿ ತಂತ್ರಿಯನ್ನು ಬ೦ಧಿಸಿದ ವಿಚಾರದಲ್ಲಿ ಎನ್.ಐ.ಟಿ.ಯಿಂದ ತಪ್ಪಾಗಿದೆ ಎಂಬ ಅಭಿಪ್ರಾಯ ಭಕ್ತರಲ್ಲಿ ವ್ಯಾಪಕವಾಗಿದೆ. ಈ ಕ್ರಮವು ಕೋಟ್ಯಾಂತರ ಭಕ್ತರ ಮನಸ್ಸಿನಲ್ಲಿ ನೋವು ಹಾಗೂ ಅಶಾಂತಿಯನ್ನುಂಟುಮಾಡಿದೆ. ಇತ್ತೀಚೆಗೆ ಹಿಂದೂ ದೇವಾಲಯಗಳು ಹಾಗೂ ಆರಾಧನಾ ಸ್ಥಳಗಳನ್ನು ಗುರಿಯಾಗಿಸಿಕೊಂಡು ಉಂಟಾಗುತ್ತಿರುವ ಸುಳ್ಳು ಆರೋಪಗಳು ಹೆಚ್ಚುತ್ತಿದೆ. ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ ವಿಷಯವಾಗಿದೆ.
ಈ ವಿಷಯದಲ್ಲಿ ಸಮಾಜವು ಎಚ್ಚೆತ್ತುಕೊಳ್ಳಬೇಕಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದ ಪ್ರಕರಣಗಳಂತೆಯೇ ಇರುವ ದುಷ್ಟಾಚಾರಗಳು, ಇಂತಹ ಆರೋಪಗಳು ಉಂಟುಮಾಡುವ ದುಷ್ಪರಿಣಾಮಗಳು ಎಷ್ಟು ಗಂಭೀರವಾಗಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ಹಿಂದೂ ಧಾರ್ಮಿಕ ಸಂಸ್ಥೆಗಳ ಗೌರವವನ್ನು ಕಾಪಾಡುವುದು ಮತ್ತು ಕಾನೂನಿನ ಪಾವಿತ್ರ್ಯವನ್ನು ರಕ್ಷಿಸುವುದು ಪರಸ್ಪರ ವಿರೋಧಿಯಾಗಿಲ್ಲ. ವಿವೇಕಪೂರ್ಣ ಹಾಗೂ ಜವಾಬ್ದಾರಿಯುತ ತನಿಖೆಯ ಮೂಲಕ ಈ ಎರಡನ್ನೂ ಒಂದೇ ಸಮಯದಲ್ಲಿ ಸಾಧಿಸಬಹುದು. ಅದ್ದರಿಂದ, ಶಬರಿಮಲೆ ತಂತ್ರಿಯ ಬ೦ಧನಕ್ಕೆ ಸ೦ಬ೦ಧಿಸಿದ ವಿಷಯದಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆದಿರುವ ಸಂಚಿನ ಕುರಿತು ಇದುವರೆಗೆ ಸಂಭವಿಸಿರುವ ತಪ್ಪುಗಳನ್ನು ಸರಿಪಡಿಸಲು ಸಂಬಂಧಿಸಿದ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶ್ರೀಗಳು ಆಗ್ರಹಿಸಿದರು.