ಮಂಜೇಶ್ವರ: ಮದುವೆ ಸಮಾರಂಭಗಳಲ್ಲಿ ದುಬಾರಿ ಕಾರುಗಳು, ಅದ್ದೂರಿ ಅಲಂಕಾರಗಳು ಇರುವುದು ಸಾಮಾನ್ಯ. ಆದರೆ ಪೆರ್ಲದ ಬಜಕೂಡ್ಲು ಪರ್ಪಕರಿಯದಲ್ಲಿ ನಡೆದ ನವೀನ್ ರೈ ಅವರ ವಿವಾಹದ ಸನ್ಮಾನ ಕೂಟದಲ್ಲಿ ಎಲ್ಲರ ಗಮನ ಸೆಳೆದದ್ದು ಒಂದು ಹಳೆಯ ಕಾಲದ ‘ಬಜಾಜ್ ಎಂ-80’ ಮೋಪೆಡ್!
ಕೇರಳ ತೋಟಗಾರಿಕಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿವಂಗತ ಅಮ್ಮು ರೈ ಅವರ ನೆಚ್ಚಿನ ವಾಹನವಿದು. ಅಪ್ಪನ ಅಗಲಿಕೆಯ ನಂತರವೂ ಅವರ ಸ್ಮರಣಾರ್ಥವಾಗಿ ಮಕ್ಕಳು ಈ ವಾಹನವನ್ನು ಅತ್ಯಂತ ಜತನದಿಂದ ಕಾಯ್ದಿರಿಸಿದ್ದರು. ಅಪ್ಪನ ಮೇಲಿನ ಅಪಾರ ಪ್ರೀತಿ ಮತ್ತು ಗೌರವದ ಸಂಕೇತವಾಗಿ, ಮಗ ನವೀನ್ ರೈ ತಮ್ಮ ಮದುವೆಯ ಸಂಭ್ರಮದ ವೇದಿಕೆಯ ಪಕ್ಕದಲ್ಲೇ ಈ ಮೋಪೆಡ್ಗೆ ಹೂವಿನ ಅಲಂಕಾರ ಮಾಡಿ ವಿಶೇಷ ಸ್ಥಾನ ನೀಡಿದ್ದರು.
ಗತಕಾಲದ ನೆನಪುಗಳನ್ನು ಮರುಕಳಿಸಿದ ಈ ದೃಶ್ಯ ಆಹ್ವಾನಿತರಲ್ಲಿ ಕೌತುಕ ಮೂಡಿಸಿತು. ಅಪ್ಪ ಬಳಸುತ್ತಿದ್ದ ವಾಹನವನ್ನು ಗುಜರಿಗೆ ಹಾಕದೆ, ಕುಟುಂಬದ ಸದಸ್ಯನಂತೆ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಮಕ್ಕಳ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.