ವಿವೇಕ್ ಎಕ್ಸ್‌ಪ್ರೆಸ್‌ನಲ್ಲಿಯೂ ಅತಿಯಾದ ನೂಕುನುಗ್ಗಲು ; ದೃಢೀಕೃತ ಟಿಕೆಟ್ ಹೊಂದಿದರೂ ಸಂಕಷ್ಟ ಅನುಭವಿಸಿದ ಕುಟುಂಬ

ಮಂಗಳೂರು: ವಿವೇಕ್ ಎಕ್ಸ್ಪ್ರೆಸ್ ರೈಲು ಸಂಖ್ಯೆ 22851 ರಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಬೋಗಿಯಲ್ಲಿನ ಅನಧಿಕೃತ ಪ್ರಯಾಣಿಕರ ಪ್ರವೇಶದಿಂದ ಅತಿಯಾದ ನೂಕುನುಗ್ಗಲಿನಿಂದ ಕುಟುಂಬ ಒಂದು ಸಂಕಷ್ಟ ಅನುಭವಿಸುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಏಳು ಮಂದಿ ಸದಸ್ಯರ ಕುಟುಂಬವು ದೃಢೀಕೃತ ಟಿಕೆಟ್ ಹೊಂದಿದ್ದರೂ, ಬೋಗಿಯೊಳಗೆ ಅನಧಿಕೃತ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡಿರುವುದರಿಂದ ಕುಳಿತುಕೊಳ್ಳಲು ಹಾಗೂ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಲಾಗಿದೆ.

ಬೋಗಿಯ ದಾರಿಗಳು ಹಾಗೂ ಸಂಪರ್ಕ ಭಾಗಗಳಲ್ಲಿ ಜನ ಕುಳಿತಿರುವುದರಿಂದ ಶೌಚಾಲಯ ಬಳಸಲು ಸಾಧ್ಯವಾಗುತ್ತಿಲ್ಲ . ಮಹಿಳೆಯರು ಮತ್ತು ಮಕ್ಕಳೂ ಪ್ರಯಾಣದಲ್ಲಿರುವ ಕಾರಣ ಆರೋಗ್ಯ ಮತ್ತು ಸುರಕ್ಷತೆ ಕುರಿತು ಕುಟುಂಬವು ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಪ್ರಯಾಣಿಕರು ರೈಲ್ವೆ ಸಹಾಯವಾಣಿ 139 ಗೆ ಸಂಪರ್ಕಿಸಿದ್ದು, ನಂತರ ಟಿಕೆಟ್ ಪರಿಶೀಲಕರು ಬಂದು ಟಿಕೆಟ್ ಪರಿಶೀಲನೆ ನಡೆಸಿದರೂ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲವೆಂದು ತಿಳಿಸಿದ್ದಾರೆ. ಚಿತ್ತೂರು ನಿಲ್ದಾಣದಲ್ಲಿ ಪೊಲೀಸರ ಸಹಾಯ ಕೋರಿದರೂ ಯಾವುದೇ ಸ್ಪಂದನೆ ದೊರಕಲಿಲ್ಲವೆಂಬ ಆರೋಪ ಕೇಳಿಬಂದಿದೆ.

ಮುಂದಿನ ಪ್ರಮುಖ ನಿಲ್ದಾಣದಲ್ಲಿ ಅನಧಿಕೃತ ಪ್ರಯಾಣಿಕರನ್ನು ತೆರವುಗೊಳಿಸಿ, ಕಾಯ್ದಿರಿಸಿದ ಟಿಕೆಟ್ ಹೊಂದಿದ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕುಟುಂಬವು ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!