ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ರಸ್ತೆ ದುರಸ್ಥಿ ಇಲ್ಲದೆ ಸಾರ್ವಜನಿಕರ ಸಂಕಷ್ಟ

ರಾಜ್ಯ ಹೆದ್ದಾರಿಯಿಂದ ಮಂಜೇಶ್ವರ ಪೊಲೀಸ್ ಠಾಣೆಗೆ ಹೋಗುವ ಸುಮಾರು ನೂರು ಮೀಟರ್ ರಸ್ತೆ ವರ್ಷಗಳಿಂದ ಸಂಪೂರ್ಣ ಹಾಳಾಗಿದ್ದು, ದುರಸ್ತಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಸಂಕಷ್ಟಕ್ಕೆ ಕಾರಣವಾಗಿದೆ.ತೀವ್ರ ಏರಿಳಿತ ಇರುವ ಈ ರಸ್ತೆ ಸಂಪೂರ್ಣವಾಗಿ ಕುಸಿದು ಹೋಗಿರುವುದರಿಂದ ಪೊಲೀಸ್ ಠಾಣೆಗೆ ಆಗಮಿಸುವ ಸಾರ್ವಜನಿಕರ ವಾಹನಗಳು ಹಾಗೂ ಪೊಲೀಸ್ ವಾಹನಗಳು ಕಷ್ಟಪಟ್ಟು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಜನಪ್ರತಿನಿಧಿಗಳು, ಸಾರ್ವಜನಿಕ ಕಾರ್ಯಕರ್ತರು ಹಾಗೂ ರಾಜಕೀಯ ನಾಯಕರು ನಿರಂತರವಾಗಿ ಈ ಮಾರ್ಗವನ್ನು ಬಳಸುತ್ತಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಸ್ಥಳೀಯರು ಆರೋಪಿಸುತ್ತಿದ್ದಾರೆ.ದಶಕಗಳ ಹಿಂದೆ ಡಾಮರ್ ಹಾಕಿದ ಈ ರಸ್ತೆ ಸಡಿಲಗೊಂಡಿದ್ದು, ಇದರಿಂದ ಎರಡು ಚಕ್ರದ ವಾಹನಗಳು ಅಪಘಾತಕ್ಕೀಡಾಗುವ ಘಟನೆಗಳೂ ಸಂಭವಿಸಿವೆ. ಗಡಿಭಾಗದ ಸಮಸ್ಯೆಗಳು ಹೆಚ್ಚಿರುವ ಈ ಪೊಲೀಸ್ ಠಾಣೆಗೆ ಹೋಗುವ ರಸ್ತೆ ಕೂಡ ಸರಿಪಡಿಸಲಾಗದಿರುವುದು ತೀವ್ರ ಟೀಕೆಗೆ ಕಾರಣವಾಗಿದೆ. ಠಾಣೆಗೆ ಪ್ರವೇಶಿಸುವ ಮಾರ್ಗವೇ ಇಂತಹ ಸ್ಥಿತಿಯಲ್ಲಿರುವುದನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಐದು ಪಂಚಾಯತ್‌ಗಳ ವ್ಯಾಪ್ತಿಗೆ ಒಳಪಡುವ ಈ ಪೊಲೀಸ್ ಠಾಣೆಯ ರಸ್ತೆಯ ದುಸ್ಥಿತಿ ಸಾರ್ವಜನಿಕರಿಗೆ ನಾಚಿಕೆಗೇಡಿನ ಸಂಗತಿಯಾಗಿದೆ. ಗುಂಡಿಗಳನ್ನು ದಾಟಿ ಪೊಲೀಸ್ ವಾಹನಗಳು ತಲುಪುವಾಗ ಕೆಲ ಪ್ರಕರಣಗಳಲ್ಲಿ ಆರೋಪಿಗಳು ತಪ್ಪಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಲಾಗುತ್ತಿದೆ.ಗಾಂಜಾ, ಎಂ.ಡಿ.ಎಂ.ಎ ಸೇರಿದಂತೆ ಮಾರಕ ಮಾದಕ ವಸ್ತುಗಳ ಪ್ರಕರಣಗಳು ವರದಿಯಾಗುವ ಮಹತ್ವದ ಠಾಣೆಯೇ ಮಂಜೇಶ್ವರ ಪೊಲೀಸ್ ಠಾಣೆಯಾಗಿದ್ದು, ಇಂತಹ ರಸ್ತೆಯ ಸ್ಥಿತಿ ಸಾರ್ವಜನಿಕ ಅಸಮಾಧಾನಕ್ಕೆ ಕಾರಣವಾಗಿದೆ. ಪಂಚಾಯತ್ ಆಡಳಿತ ಸಮಿತಿಯ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!