ಮಂಗಳೂರು: ರಾಜ್ಯದ ಸರಕಾರಿ ಆರೋಗ್ಯ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಾ ಇಲ್ಲ, ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧ ಸರಬರಾಜು ಮಾಡಲು ಸಾಧ್ಯವಾಗದ ಇಲಾಖೆಯು ಸಾರ್ವಜನಿಕರಿಗೆ ಯಾವ ಆರೋಗ್ಯ ಭಾಗ್ಯ ನೀಡುತ್ತಿದೆ ಎಂದು
ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ರಾಜ್ಯ ಸರಕಾರಕ್ಕೆ ಪ್ರಶ್ನಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಿಡಿದಿದ್ದ ಅವರು , ರಾಜ್ಯ ಸರ್ಕಾರದ ಧೋರಣೆ ಹಾಗೂ ಆರೋಗ್ಯ ಇಲಾಖೆ ಜವಾಬ್ದಾರಿ ಇಲ್ಲದ ನಡೆ ಸರಿಯಲ್ಲ .ತಮ್ಮ ೧೨ ಬೇಡಿಕೆಗಳನ್ನು ಮುಂದಿಟ್ಟು ಸರಕಾರ ಈ ಬೇಡಿಕೆಯನ್ನು ಈಡೇರಿಸಬೇಕು ಇಲ್ಲದಿದ್ದರೆ ಮಾರ್ಚ್ ೧೧ ರಿಂದ ೧೫ ರ ತನಕ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿ ತುರ್ತು ಸೇವೆಗೆ ಮಾತ್ರ ಸ್ಪಂದನೆ ನೀಡಲಾಗುವುದು . ನಮ್ಮ ಬೇಡಿಕೆ ಆ ದಿನದಲ್ಲೂ ಈಡೇರದೇ ಇದಲ್ಲಿ ಮಾರ್ಚ್ ೧೬ ರಿಂದ ಕೆಲಸ ಕಾರ್ಯವನ್ನು ಸ್ಥಗಿತ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ನಾವು 21ನೇ ಶತಮಾನದಲ್ಲಿದ್ದೇವೆ, ಆದರೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳು ಮಾತ್ರ ಇನ್ನೂ 1973ರ ಕಾಲದಲ್ಲಿವೆ! ಎಂದು ಕಿಡಿಕಾರಿದರು. ಕಳೆದ 50 ವರ್ಷಗಳಿಂದ ನಿಯಮ ತಿದ್ದುಪಡಿ ಮಾಡದೆ, 5 ವರ್ಷಗಳಿಂದ ಯಾರೊಬ್ಬರಿಗೂ ಮುಂಬಡ್ತಿ (Promotion) ನೀಡದೆ ವೈದ್ಯರ ಬದುಕಿನೊಂದಿಗೆ ಆಟವಾಡುತ್ತಿರುವ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದರು.
ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಔಷಧ ಸರಬರಾಜು ಮಾಡಲು ಸಾಧ್ಯವಾಗದ ಇಲಾಖೆಯು ಸಾರ್ವಜನಿಕರಿಗೆ ಯಾವ ಆರೋಗ್ಯ ಭಾಗ್ಯ ನೀಡುತ್ತಿದೆ ಎಂದು ಪ್ರಶ್ನಿಸಿದ ಅವರು, ಕೇಂದ್ರ ಪುರಸ್ಕೃತ ಯೋಜನೆ ಅಡಿ ದುಡಿಯುವ 6,000 ನೌಕರರಿಗೆ 4 ತಿಂಗಳಿಗೊಮ್ಮೆ ಸಂಬಳ ನೀಡುವ ಮೂಲಕ ಅವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ಗುಡುಗಿದರು.
ಸಂಘದ ಪ್ರಮುಖ ಬೇಡಿಕೆಗಳನ್ನು ಅವರು ಸರಕಾರದ ಮುಂದೆ ಮುಂದಿಡುತ್ತಾ , ಕೌನ್ಸಿಲಿಂಗ್ ಹೆಸರಿನಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ವರ್ಗಾವಣೆಗಳನ್ನು ತಕ್ಷಣ ನಿಲ್ಲಿಸಬೇಕು, ವೇತನ ತಾರತಮ್ಯ ಹೋಗಲಾಡಿಸಿ, ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲೇ ಸಿ.ಜಿ.ಹೆಚ್.ಎಸ್ ವೇತನ ಶ್ರೇಣಿ ಜಾರಿಗೊಳಿಸಬೇಕು , ಖಾಲಿ ಹುದ್ದೆ ಭರ್ತಿ ಮಾಡಬೇಕು- ಸಾವಿರಾರು ಹುದ್ದೆಗಳನ್ನು ಖಾಲಿ ಇಟ್ಟುಕೊಂಡು ವೈದ್ಯರ ಮೇಲೆ ಅತಿಯಾದ ಕೆಲಸದ ಒತ್ತಡ ಹೇರುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ. ಅಕ್ಷತಾ, ಉಪಾಧ್ಯಕ್ಷರಾದ ಡಾ. ಶರತ್ ಬಾಬು ಹಾಗೂ ಡಾ. ರಾಜೇಶ್, ಖಜಾಂಜಿ ಡಾ. ತುಫೈಲ್, ಆರೋಗ್ಯ ಇಲಾಖೆಯ ಎಲ್ಲ ವೃಂದದ ದಕ್ಷಿಣ ಕನ್ನಡ ಶಾಖೆಯ ಅಧ್ಯಕ್ಷೆ ಮಹಾಲಕ್ಷ್ಮಿ, ಕಾರ್ಯದರ್ಶಿ ಯೋಗೇಶ್ ಉಪಸ್ಥಿತರಿದ್ದರು.