ಪುತ್ತೂರು: ಮಹಿಳಾ ಕಾಲೇಜಿನ ಪ್ರಾಂಶುಪಾಲರ ವರ್ಗಾವಣೆಯ ವಿಚಾರ ಮಾದ್ಯಮದಲ್ಲಿ ನೋಡಿದ್ದೇನೆ. ಇದೊಂದು ಶಾಸಕರ ಸೇಡಿನ ಕ್ರಮದಂತೆ ಕಾಣುತ್ತಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಮಾಧ್ಯಮದೊಂದಿಗೆ ಹೇಳಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡಲು ಹಕ್ಕಿದೆ. ಪ್ರಜಾಪ್ರಭುತ್ವದಲ್ಲಿ ಅನುಮತಿ ಪಡೆದೇ ಪ್ರತಿಭಟನೆ ಮಾಡಬೇಕೆಂದು ಏನು ಇಲ್ಲ. ವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಪ್ರತಿಭಟನೆಯಿಂದ ಸಾರ್ವನಿಕರಿಗೆ ಅಡ್ಡಿಯಾಗುತ್ತಿದೆಯಾ? ಎಂಬುದು ಮಾತ್ರ ನೋಡಬೇಕಿದ್ದು. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಾರ್ವಜನಿಕರಿಗೆ, ವಾಹನಗಳಿಗೆ ಅಡ್ಡಿಯಾಗಿಲ್ಲ. ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು 18 ವರ್ಷ ಪ್ರಾಯದ ಮೇಲ್ಪಟ್ಟವರು. ಅವರು ಪ್ರಬುದ್ಧರು. ಮಕ್ಕಳು ಪ್ರತಿಭಟನೆ ಮಾಡುವುದು ಇದೇ ಮೊದಲಲ್ಲ. ಎಷ್ಟೋ ಪ್ರತಿಭಟನೆ ನಡೆದಿದೆ. ಆಗ ಯಾವ ಪ್ರಾಂಶುಪಾಲರ ಮೇಲೆಯೂ ಆಕ್ಷನ್ ಆಗಿಲ್ಲ. ಕಾಲೇಜಿನಲ್ಲಿ ಸಮಸ್ಯೆ ಆಗಿರುವ ಕುರಿತು ಪತ್ರಿಕೆಗಳಲ್ಲಿ ಉಲ್ಲೇಖ ಆಗಿದೆ.
ಅಲ್ಲಿನ ಇಡೀ ಘಟನೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕರಿಗೆ ಗೊತ್ತಿರಬೇಕು. ಶಾಸಕರ ಗಮನಕ್ಕೆ ಇದು ಬರಲಿಲ್ಲ ಎಂದಾದರೆ ಶಾಸಕರು ಕಾಲೇಜಿನ ಬಗ್ಗೆ ಎಷ್ಟು ಗಮನ ಕೊಟ್ಟಿರಬಹುದು ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ. ಪ್ರತಿಭಟನೆ ಕುರಿತು ಕಾಲೇಜಿನಿಂದ ಮುನ್ಸೂಚನೆ ಶಾಸಕರಿಗೆ ನೀಡಿದ್ದಾರೆ. ಕೊಟ್ಟ ಮೇಲೆಯೂ ಮಹಿಳಾ ಕಾಲೇಜಿನ ಪ್ರಾಂಶುಪಾಲರ ಮೇಲೆ ಸೇಡಿನ ಕ್ರಮ ಕೈಗೊಂಡಿದ್ದಾರೆ. ಆ ಪ್ರಾಂಶುಪಾಲರು ಓರ್ವ ಮಹಿಳೆ ಮತ್ತು ಅನಾರೋಗ್ಯದಲ್ಲಿದ್ದಾರೆ. ಜೊತೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಅವರ ಮೇಲೆ ಆಕ್ಷನ್ ತೆಗೆದುಕೊಳ್ಳುವುದು, ಒಬ್ಬ ಮಹಿಳೆಯ ಮೇಲೆ ಶಾಸಕರಿಗೆ ಇರುವ ಕಾಳಜಿ ಎಷ್ಟಿದೆ ಎಂಬುದು ತಿಳಿಯುತ್ತದೆ. ಒಂದು ರೀತಿಯ ಗೂಂಡಾ ಪ್ರವೃತ್ತಿ ಪುತ್ತೂರಿನಲ್ಲಿ ಪುನರಾವರ್ತನೆ ಆಗುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.