ಮಂಜೇಶ್ವರ: ಉಪ್ಪಳದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಸುಮಾರು 38 ಗ್ರಾಂನಷ್ಟು ಭೀಕರ ರಾಸಾಯನಿಕ ಮಾದಕ ದ್ರವ್ಯ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ಮಂಜೇಶ್ವರ ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ನಗದು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಗಡಿ ನಾಡು ಪ್ರದೇಶವಾದ ಮಂಜೇಶ್ವರದಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಉಪ್ಪಳದ ಮಂಗಳಪಾಡಿ ತಾಲೂಕು ಆಸ್ಪತ್ರೆಯ ಬಳಿ ಇಂದು ಮುಂಜಾನೆ ಮಂಜೇಶ್ವರ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ರಾಸಾಯನಿಕ ಮಾದಕ ದ್ರವ್ಯ ಪತ್ತೆಯಾಗಿದೆ.
ಕುಂಬಳೆ ಶಿರಿಯಾ ನಿವಾಸಿ ಇಬ್ರಾಹಿಂ ಸುಹೈಲ್ ಹಾಗೂ ಬಂದ್ಯೋಡು ಅಡ್ಕ ನಿವಾಸಿ ಮಹಮ್ಮದ್ ಅನಸುದ್ದೀನ್ ಬಂಧಿತ ಆರೋಪಿಗಳು. ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಯ ಸಮೀಪವಿರುವ ಸರ್ವಿಸ್ ರಸ್ತೆಯಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಮಾದಕ ದ್ರವ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮಂಜೇಶ್ವರ ಎಸ್‌ಐ ವೈಷ್ಣವ್ ರಾಮಚಂದ್ರನ್ ಅವರಿಗೆ ಲಭಿಸಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ಧಾವಿಸಿ ಕಾರನ್ನು ಸುತ್ತುವರಿದಿದ್ದಾರೆ.
ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಡ್ಯಾಶ್‌ಬೋರ್ಡ್‌ನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ, ಸಹ ಪ್ರಯಾಣಿಕನ ಸೀಟಿನ ಹಿಂಭಾಗದ ಪೌಚ್‌ನಲ್ಲಿ ಜಿಪ್‌ಲಾಕ್ ಕವರ್‌ಗಳಲ್ಲಿ ಅಡಗಿಸಿಟ್ಟಿದ್ದ 38.23 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಬಂಧಿತರಿಂದ ಒಟ್ಟು 1,62,500 ರೂಪಾಯಿ ನಗದು, ಎರಡು ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕೆಎಲ್ 14 ಎಬಿ 9253 ಸಂಖ್ಯೆಯ ಸ್ವಿಫ್ಟ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ಹಣ ಮಾದಕ ದ್ರವ್ಯ ಮಾರಾಟದಿಂದ ಬಂದಿದ್ದೆಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಡ್ರಗ್ಸ್ ಜಾಲದ ಮೂಲ ಯಾವುದು? ಇದರ ಹಿಂದೆ ಇರುವ ಇತರ ಕಿಂಗ್‌ಪಿನ್‌ಗಳು ಯಾರು ಎಂಬ ಬಗ್ಗೆ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.