ಪಳ್ಳಿಕ್ಕರದಲ್ಲಿ ಭಯಭಕ್ತಿಯ ಒತ್ತೆಕೋಲ: ಜ್ವಾಲೆಯ ನಡುವೆ ವಿಷ್ಣುಮೂರ್ತಿಯ ಅಗ್ನಿ ಪ್ರವೇಶ

ಕಾಸರಗೋಡು ಜಿಲ್ಲೆಯ ಪಳ್ಳಿಕ್ಕರ ಪಂಚಾಯತ್ ವ್ಯಾಪ್ತಿಯ ಚೇಟ್ಟುಕುಂಡು ಭಾಗದಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಒತ್ತೆಕೋಲ ಸೇವೆಯು ಶನಿವಾರ ನಡೆಯಿತು .ಸಾಮಾನ್ಯವಾಗಿ ಭೂತಾರಾಧನೆಯಲ್ಲಿ ಉಳಿದ ತೆಯ್ಯಮ್ ಗಳಿಗಿಂತ ಭಿನ್ನವಾಗಿ ಈ ಒತ್ತೆಕೋಲ ನಡೆಯುವುದು ವಾಡಿಕೆಯಾಗಿದೆ. ಒತ್ತೆಕೋಲದಲ್ಲಿ ಶ್ರೀ ವಿಷ್ಣು ಮೂರ್ತಿ ದೈವದ ನಿಗಿ ನಿಗಿಯುವ ಅಗ್ನಿಯ ಪ್ರವೇಶದ ದೃಶ್ಯ ನೋಡುಗರ ಕಣ್ಣಲ್ಲಿ ಭಯ ಭಕ್ತಿಯನ್ನು ತುಂಬುತ್ತದೆ . ಧನೀಷ್ ಪಣಿಕ್ಕರ್ ವಿಷ್ಣು ಮೂರ್ತಿ ಕೋಲಧಾರಿಯಾಗಿದ್ದರು .

ಕೇಸರಿ ಮುಖವರ್ಣಿಕೆಯ ಈ ದೈವವು ಶ್ರೀ ವಿಷ್ಣುವಿನ ಅವತಾರವೆಂದು ಐತಿಹ್ಯ ಕಥೆಗಳು ತಿಳಿಸುತ್ತದೆ .ಹಿರಣ್ಯಕಶಿಪು ತನ್ನ ಮಗನಾದ ಪ್ರಹ್ಲಾದನಿಗೆ ನೀಡುತ್ತಿದ್ದ ಪರೀಕ್ಷೆಯಿಂದ ಕುಪಿತನಾದ ವಿಷ್ಣುವು ಉಗ್ರ ನರಸಿಂಹನಾಗಿ ಸ್ತಂಭ ಒಡೆದು ಹಿರಣ್ಯ ಕಶ್ಯಪು ನನ್ನು ಸಂಹರಿಸುವ ಘಟನೆಯನ್ನು ಈ ದೈವವು ತನ್ನ ಅಭಿನಯದ ಮೂಲಕ ತಿಳಿಸುತ್ತದೆ . ವಿಷ್ಣುಮೂರ್ತಿಯ ಅಗ್ನಿ ಪ್ರವೇಶಕ್ಕೂ ಮುನ್ನ ವಿಷ್ಣುಮೂರ್ತಿ ಕೋಲಾಧಾರಿಯು ಕುಳಿಚ್ಚಾಟ ಕಟ್ಟಿ ಆಡುತ್ತಾರೆ . ಈ ಕುಳಿಚ್ಚಾಟದಲ್ಲಿ ಹಿರಣ್ಯ ಕಶ್ಯಪನನ್ನು ಕೊಂದು ಆತನ ಹೊಟ್ಟೆಯನ್ನು ಸೀಳುವ ಸಂಕೇತನವನ್ನು ಪ್ರದರ್ಶಿಸುತ್ತದೆ. ಈ ಸಂದರ್ಭದಲ್ಲಿ ಕುಳಿಚ್ಚಾಟ ಉರಿಯುತ್ತಿರುವ ಬೆಂಕಿಗೆ ಹಾರಲು ಮುಂದಾಗುತ್ತದೆ . ಆದರೆ ಸಹಚರರು ಅವರನ್ನು ತಡೆಯುತ್ತಾರೆ .

ಕುಳಿಚ್ಚಾಟ ಮುಗಿದ ಮೇಲೆ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶಕ್ಕಾಗಿ ಸಕಲ ಸಿದ್ದತೆಯನ್ನು ನಡೆಸಲಾಗುತ್ತದೆ . ತೆಂಗಿನ ತಿರಿ ಮಡಲಿನ ರಕ್ಷಣೆ , ಕೇಸರಿ ಮುಖವರ್ಣಿಕೆ , ಅಂದವನ್ನು ಹೆಚ್ಚಿಸುವ ಚೇಪುಳ ಹೂವು ಹೀಗೆ ದೈವವು ಅಗ್ನಿ ಪ್ರವೇಶಕ್ಕಾಗಿ ಸಂಪೂರ್ಣವಾಗಿ ತಯಾರಿಯಾಗುತ್ತದೆ . ದೈವವು ಬೆಂಕಿಗೆ ಹಾರುವ ಮೊದಲು ವಿಷ್ಣುಮೂರ್ತಿಗೆ ಸಂಬಂಧ ಪಟ್ಟ ಬೆಲ್ಚಪಾಡರು ರಾಶಿ ಹಾಕಿರುವ ಕೆಂಡದ ಮೇಲೇರಿಯ ಮೇಲೆ ಓಡುತ್ತಾರೆ. ಬಳಿಕ ವಿಷ್ಣುಮೂರ್ತಿ ದೈವವು ಅಗ್ನಿ ಪ್ರವೇಶವನ್ನು ಮಾಡುತ್ತದೆ . ಐತಿಹ್ಯಗಳು ಹೇಳುವಂತೆ ಹಿರಣ್ಯ ಕಶ್ಯಪುವಿನ ಸಂಹಾರ ಮಾಡಿದ ಮಹಾವಿಷ್ಣುವು ತನ್ನ ಮೈಗಂಟಿದ ಮೈಲಿಗೆಯನ್ನು ಬೆಂಕಿಯಲ್ಲಿ ಮಿಂದು ಶುದ್ಧಗೊಳಿಸುತ್ತಾನೆ ಎಂಬುವುದು ಈ ಆಚರಣೆಯ ಹಿಂದಿರುವ ನಂಬಿಕೆಯಾಗಿದೆ.

ಜ್ವಾಲೆಯಾಗಿ ಉರಿಯುವ ಕೆಂಡದ ರಾಶಿಯ ಮೇಲೆ ದೈವ ಮುಮ್ಮುಖವಾಗಿ ಮಲಗುತ್ತದೆ. ಅದರ ಜೊತೆಗಿದ್ದವರು ದೈವವನ್ನು ಕೆಂಡದ ರಾಶಿಯಿಂದ ಸರ ಸರನೇ ಎಳೆಯುತ್ತಾರೆ . ರೋಷಾವೇಷದಲ್ಲಿರುವ ದೈವ ಪದೇ ಪದೇ ಕೆಂಡದ ರಾಶಿಯತ್ತ ನುಗ್ಗುತ್ತದೆ. ದೈವದ ಜೊತೆ ಸಾಗುವವರು ದೈವದ ಆವೇಶವನ್ನು‌ ತಡೆಯಲು ಹರ ಸಾಹಸವನ್ನೇ ಪಡುತ್ತಾರೆ .
ಸಾಮಾನ್ಯವಾಗಿ ಊರಿಗೆ ಅಂಟಿದ ಮಾರಿಯನ್ನು ಹೋಗಲಾಡಿಸಲು ಈ ಅಗ್ನಿ ಸೇವೆಯನ್ನು ಮಾಡಿಸಲಾಗುತ್ತದೆ ಎನ್ನುವ ಕಥೆಗಳು ಮಲಬಾರ್ ,ದಕ್ಷಿಣ ಕನ್ನಡ ಭಾಗದಲ್ಲಿ ಉಚ್ರ್ಯಾಯ ಸ್ಥಿತಿಯಲ್ಲಿದೆ .

ಬರಹ : ಗಿರೀಶ್ ಪಿ ಎಂ

SHARE
Loading spinner

Leave a Reply

Your email address will not be published. Required fields are marked *

error: Content is protected !!