ಮಂಜೇಶ್ವರ: ಕೇರಳದಾದ್ಯಂತ ಕಳ್ಳತನ ನಡೆಸಿ ಪೊಲೀಸರಿಗೆ ತಲೆನೋವಾಗಿದ್ದ ಕುಖ್ಯಾತ ಕಳ್ಳ ‘ಶಟರ್’ ಜಲೀಲ್ ಹಾಗೂ ಅವನ ಸಹಚರನನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್ ನೇತೃತ್ವದ ತಂಡ ನಡೆಸಿದ ತಾಂತ್ರಿಕ ಕಾರ್ಯಾಚರಣೆಯಲ್ಲಿ ಈ ಖತರ್ನಾಕ್ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಕುಂಬಳೆ ಹಾಗೂ ಪೆರಿಯಾದಲ್ಲಿ ನಡೆದ ಸರಣಿ ಕಳ್ಳತನ ಪ್ರಕರಣಗಳನ್ನು ಬೆನ್ನಟ್ಟಿದ ಪೊಲೀಸರು, ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಪಾಲಕ್ಕಾಡ್ ಚಿತ್ತೂರು ನಿವಾಸಿ ‘ಶಟರ್’ ಜಲೀಲ್ ಅಲಿಯಾಸ್ ಅಯಿರೂರ್ ಕೊಳಕ್ಕಪರಂಬಿಲ್ ಜಲೀಲ್ (36) ಹಾಗೂ ಕದ್ದ ಮಾಲುಗಳನ್ನು ಮಾರಾಟ ಮಾಡಲು ಸಹಾಯ ಮಾಡುತ್ತಿದ್ದ ಕಾಸರಗೋಡು ಆಲಂಪಾಡಿ ನಿವಾಸಿ ಅಬ್ದುಲ್ ಲತೀಫ್ ಬಂಧಿತ ಆರೋಪಿಗಳು.ಕಳೆದ ಫೆಬ್ರವರಿ 14 ರಂದು ಕುಂಬಳೆ ಕಳತ್ತೂರಿನ ಯೂಸುಫ್ ಎಂಬುವವರ ಮನೆಯಿಂದ 9 ಪವನ್ ಚಿನ್ನಾಭರಣ ಹಾಗೂ 1 ಲಕ್ಷ ರೂಪಾಯಿ ನಗದನ್ನು ಕಳವು ಮಾಡಲಾಗಿತ್ತು. ಅದಕ್ಕೂ ಮೊದಲು ಫೆಬ್ರವರಿ 7 ರಂದು ಪೆರಿಯಾದ ಇ.ವಿ. ಗೋಪಾಲಕೃಷ್ಣನ್ ಅವರ ಮನೆಯಲ್ಲೂ ಇದೇ ರೀತಿ 6 ಪವನ್ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಹಣವನ್ನು ದೋಚಲಾಗಿತ್ತು. ಈ ಎರಡು ಕಳ್ಳತನಗಳ ಶೈಲಿ ಒಂದೇ ಆಗಿದ್ದರಿಂದ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.
ಈ ‘ಶಟರ್’ ಜಲೀಲ್ ಕಳ್ಳತನ ಮಾಡುವ ರೀತಿ ಬಹಳ ವಿಭಿನ್ನ. ಕಾಸರಗೋಡಿನಲ್ಲಿ ಬಾಡಿಗೆ ಮನೆ ಪಡೆದಿದ್ದ ಈತ, ಹಗಲು ಹೊತ್ತಿನಲ್ಲಿ ಕರ್ನಾಟಕದ ಕೋಳಿ ಫಾರ್ಮ್ಗಳಲ್ಲಿ ಕೆಲಸಕ್ಕಿದ್ದಂತೆ ನಟಿಸುತ್ತಿದ್ದ. ಇದೇ ಸಮಯದಲ್ಲಿ ಕಳ್ಳತನ ಮಾಡಬೇಕಾದ ಮನೆಗಳನ್ನು ಗುರುತಿಸುತ್ತಿದ್ದ. ಅಂಗಡಿಗಳ ಶಟರ್ ಹಾಗೂ ಮನೆಗಳ ಬಾಗಿಲನ್ನು ಮುರಿದು ಕ್ಷಣಮಾತ್ರದಲ್ಲಿ ಕಳ್ಳತನ ಮಾಡುವಲ್ಲಿ ಈತ ನಿಪುಣ. ಈ ಕಾರಣಕ್ಕಾಗಿಯೇ ಈತನಿಗೆ ‘ಶಟರ್ ಜಲೀಲ್’ ಎಂಬ ಹೆಸರು ಬಂದಿದೆ.
ಜೈಲಿನಲ್ಲಿದ್ದಾಗ ಪರಿಚಯವಾದ ಸಹ ಕೈದಿಗಳ ಊರುಗಳಿಗೆ ತೆರಳಿ ಅಲ್ಲಿ ಕಳ್ಳತನ ಮಾಡುವುದು ಈತನ ಹವ್ಯಾಸ. ಅಂಬಲತ್ತರದಲ್ಲಿ ನಡೆದ ಲ್ಯಾಪ್ಟಾಪ್ ಕಳ್ಳತನ ಪ್ರಕರಣದಲ್ಲೂ ಈತನೇ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಬೇಕಲ ಡಿವೈಎಸ್ಪಿ ಎಂ.ಪಿ. ಆಜಾದ್, ಎಸ್ಐಗಳಾದ ಪಿ. ಅಖಿಲ್ ಹಾಗು ಟಿ. ಅಖಿಲ್ ಸೆಬಾಸ್ಟಿಯನ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ