ನದಿಯಾಗಿ ಹರಿದು ಕಡಲು ಸೇರಲೇ ಇಲ್ಲ ನಮ್ಮೀ ಪ್ರೀತಿ

ನನ್ನ ನಿನ್ನ ಭೇಟಿ ಆಕಸ್ಮಿಕವೇ ಆದರೂ ಅದು ಸಂಬಂಧದಲ್ಲಿ ಕೊನೆಗೊಂಡಿದ್ದು ಮಾತ್ರ ವಿಪರ್ಯಾಸ. ಆಕಸ್ಮಿಕ ಭೇಟಿ ಮಾತಿನ ಮೂಲಕ ಮುಂದುವರಿದು, ಗೆಳೆತನ ಚಿಗುರೊಡೆಯಿತು. ಹೀಗೆ ನಮ್ಮ ನಡುವೆ ಬಾಂಧವ್ಯ ಬೆಳೆದದ್ದೇ ತಿಳಿಯಲಿಲ್ಲ. ಅಷ್ಟು ಬೇಗ ನಮ್ಮ ನಡುವೆ ಸಲುಗೆ ಹುಟ್ಟಿತು. ಆ ಮೊದಲ ಭೇಟಿಯ ಸವಿನೆನಪು ಮನಸ್ಸಿನಲ್ಲಿ ಇಂದಿಗೂ ಹಸಿರಾಗಿಯೇ ಉಳಿದಿದೆ.

ಅಂದು ಮಳೆ ರಚ್ಚೆ ಹಿಡಿದಂತೆ ಸುರಿಯುತ್ತಿತ್ತು. ಮಳೆ ನಡುವೆಯೇ ಗಾಳಿ, ಚಳಿಯ ಮಧ್ಯೆಯೇ ನಿನ್ನ ಭೇಟಿ ಬೆಚ್ಚನೆಯ ಭಾವ ನೀಡಿತ್ತು. ನಮ್ಮ ನಡುವೆ ಮಾತು ಬೆಳೆಯಲು ಮಳೆ ಒಂದು ನೆಪವಾಗಿ ಸಿಕ್ಕಿತ್ತು. ಆಗಂತುಕರಾಗಿದ್ದ ನಾವು ದಿನಕಳೆದಂತೆ ಗೆಳೆಯರಾದೆವು. ಫೋನಿನ ಸಂಭಾಷಣೆ ನಿರಂತರವಾಗಿ ಸಾಗುತ್ತಲೇ ಇತ್ತು. ಈ ನಡುವೆ ಮನಸ್ಸಿನ ಮೂಲೆಯಲ್ಲೆಲ್ಲೋ ಪ್ರೀತಿ ಚಿಗುರೊಡೆದದ್ದು ತಿಳಿಯಲೇ ಇಲ್ಲ.

ಪ್ರೇಮಿಗಳ ದಿನದಂದು ಪ್ರೇಮ ನಿವೇದಿಸಿಕೊಂಡಾಗಲೇ ಅಗೋಚರವಾಗಿ ಗುಪ್ತಗಾಮಿನಿಯಂತೆ ಹರಿಯುತ್ತಿದ್ದ ಪ್ರೇಮ ಗೋಚರವಾಗಿ ನಿಂತಿತ್ತು. ವಾಸ್ತವವಾಗಿ ನಿನ್ನ ಸೌಂದರ್ಯಕ್ಕೆ ಸೋತವಳು ನಾನಲ್ಲ. ನಿನ್ನಲ್ಲಿರುವ ಮಗುವಿನ ಮುಗ್ಧ ಮನಸ್ಸಿಗೆ ಸೋತವಳು ನಾನು. ನನ್ನ ಹುಡುಗ ತನ್ನ ತಾಯಿಯನ್ನು ಪ್ರೀತಿಸುವ ಹಾಗೆ ತನ್ನ ಹುಡುಗಿಯನ್ನು ಪ್ರೀತಿಸಬೇಕು ಎಂದು ಬಯಸಿದವಳು ನಾನು. ಹಾಗೆ ಪ್ರೀತಿಸುವ ಹುಡುಗ ತನ್ನ ಹುಡುಗಿಗೂ ತಾಯಿಯಷ್ಟೇ ಪ್ರೀತಿ ನೀಡುತ್ತಾನೆ ಎಂಬ ಅದಮ್ಯ ಆಸೆ ಮನಸ್ಸಿನಲ್ಲಿತ್ತು.

ನಾನು ಇದುವರೆಗೂ ಕಲ್ಪನೆ ಮಾಡಿಕೊಳ್ಳುತ್ತಿದ್ದ ಹುಡುಗ ಕಣ್ಣ ಎದುರಿಗೇ ಸಿಕ್ಕಾಗ ಇಡೀ ಜಗತ್ತನ್ನೇ ಗೆದ್ದ ಸಂಭ್ರಮ ನನ್ನಲ್ಲಿ ಮನೆ ಮಾಡಿತ್ತು. ನೀನು ತೋರಿದ ಪ್ರೀತಿಗೆ, ಕಾಳಜಿಗೆ, ಮಮಕಾರಕ್ಕೆ, ಭಾವನೆಯ ಪ್ರತಿಸ್ಪಂದನೆಗೆ ಸೋತು ಹೋಗಿದ್ದೆ. ಎಲ್ಲವೂ ಸುಂದರವಾಗಿದೆ ಎನ್ನುವಷ್ಟರಲ್ಲೇ ಇದುವರೆಗೂ ನೋಡಿದ್ದು ಮುಖವಾಡ ಎಂಬುದು ತಿಳಿಯುತ್ತಲೇ ಮನಸ್ಸು ಬಾಡಿ ಹೋಗಿತ್ತು. ಅಕ್ಷರಶಃ ಕುಸಿದು ಹೋಗಿದ್ದೆ. ಮೇಲೆ ಏಳಬೇಕು ಎಂತಲೇ ಅನಿಸುತ್ತಿರಲಿಲ್ಲ. ಅಷ್ಟರಮಟ್ಟಿಗೆ ಕುಸಿದುಹೋಗಿದ್ದೆ.

ಹೀಗೆ, ದಿನಕಳೆಯುತ್ತಲೇ ಇತ್ತು. ಮನಸ್ಸು ನಿಧಾನವಾಗಿ ನಿನ್ನನ್ನು ಮರೆಯಲು ಪ್ರಯತ್ನಿಸುತ್ತಿದ್ದಾಗಲೇ ಆ ದಿನ ಜಾತ್ರೆಯಲ್ಲಿ ನೀನು ದುತ್ತೆಂದು ಕಣ್ಣ ಮುಂದೆ ಕಾಣಿಸಿಕೊಂಡೆ. ಇದುವರೆಗೂ ನಿನ್ನನ್ನು ಎಂದಿಗೂ ನೋಡಲಾರೆ ಎಂದು ಮನಸ್ಸನ್ನು ಕಲ್ಲು ಮಾಡಿಕೊಂಡು ಬಿಟ್ಟಿದ್ದೆ. ಆ ದಿನ ನಾನು ಅಪ್ಪನ ಜೊತೆಗೆ ಜಾತ್ರೆ ಸುತ್ತುವ ಸಂಭ್ರಮದಲ್ಲಿ ಕಳೆದುಹೋಗಿದ್ದೆ. ಅದ್ಯಾವುದೋ ಮಾಯಾವಿಯಂತೆ ನೀನು ನನ್ನ ಕಣ್ಣ ಮುಂದೆ ಕಾಣಿಸಿಕೊಂಡೆ. ಅಲ್ಲಿಗೆ ನನ್ನೆಲ್ಲಾ ಸಂಭ್ರಮ, ಕುಣಿತ ಎಲ್ಲವೂ ನಿಂತು ಹೋಗಿತ್ತು.

ನಿನ್ನನ್ನು ನೋಡದೇ ಅದೆಷ್ಟೋ ದಿನಗಳು ಕಳೆದು ಹೋಗಿತ್ತು. ನೀನು ಜಾತ್ರೆಗೆ ಬರುವುದಿಲ್ಲ ಎಂಬ ಖಾತ್ರಿಯಿಂದಲೇ ಬಂದಿದ್ದೆ. ಆದರೆ, ನೀನು ಅದೆಲ್ಲೋ ಸಂಧಿಯಲ್ಲಿ ನುಸುಳಿಬಿಟ್ಟಿದ್ದೆ. ನಿನ್ನ ನೋಡಿ ಭಾವುಕಳಾಗಿ ಕಣ್ಣು ತುಂಬಿಕೊಂಡೆ. ಸಂಜೆ ಮನೆಗೆ ಹೋಗುವಾಗ ಅಯ್ಯೋ ಹೋಗುತ್ತಿದ್ದೇನೆ ಎಂದು ದುಃಖಿತಳಾದೆ. ಹೋಗುವ ದಾರಿಯುದ್ದಕ್ಕೂ ನಿನ್ನದೇ ಕನವರಿಕೆ. ಒಮ್ಮೆ ಮಾತನಾಡಿಸಬೇಕಿತ್ತು ಎಂಬ ತವಕ. ಆದರೆ ನಿನ್ನ ಅನೇಕ ಮುಖವಾಡಗಳ ಪರಿಚಯವಾದ ನಂತರವೂ ಮಾತನಾಡಿಸುವ ಛಲ ನನ್ನಲ್ಲಿ ಉಡುಗಿ ಹೋಗಿತ್ತು.

ಪ್ರೀತಿ ಹುಟ್ಟಲು ಒಂದು ಕ್ಷಣ ಸಾಕು, ಆದರೆ ಅದೇ ಪ್ರೀತಿ ಮುರಿದು ಬಿದ್ದಾಗ ಮರೆಯಲು ಯುಗಗಳೇ ಬೇಕಾಗುತ್ತದೆ. ನಿನ್ನ ಮುಗುಳುನಗೆ ಮುಖಕ್ಕೆ ಸೋತ ನಾನು, ಅದೇ ಮುಗುಳುನಗೆ ಹಿಂದೆ ಸಾವಿರಾರು ಮುಖವಾಡಗಳಿವೆ ಎಂಬುದನ್ನು ಅರಿತ ಮೇಲೆ ವಾಸ್ತವವಾಗಿ ಮೋಸ ಹೋದದ್ದು ಸ್ಪಷ್ಟವಾಗಿತ್ತು. ನನ್ನ ಮಟ್ಟಿಗೆ ಪ್ರೀತಿ ಎಂದರೆ ನಂಬಿಕೆ ಎಂದಾದರೆ ನಿನಗೆ ಅನುಮಾನದ ಮೂಟೆಯಾಗಿತ್ತು.

ಬದುಕಿಗೆ ಬಡತನವಿರಬಹುದು, ಪ್ರೀತಿಗೆ ಎಂದಿಗೂ ಬಡತನ ಕಾಡುವುದಿಲ್ಲ. ಬಹುಶಃ ಎಲ್ಲಾ ಪ್ರೀತಿಯೂ ಹೀಗೆ ಎನಿಸುತ್ತದೆ ಅನುಮಾನದಲ್ಲೇ ಕೊನೆಯಾಗುವುದು. ನನ್ನ ಬದುಕಿನಲ್ಲಿ ನಿನಗಾಗಿ ಕೊಟ್ಟ ಪ್ರೀತಿಯ ಪಟ್ಟ ಹಾಗೆಯೇ ಇದೆಯಾದರೂ ನಿನ್ನಿಂದ ಮಾನಸಿಕವಾಗಿ, ದೈಹಿಕವಾಗಿ ದೂರವೇ ಉಳಿದುಬಿಟ್ಟಿದ್ದೇನೆ. ಅಂದು ತಾಯಿಯಾಗಿ ನಿನಗೆ ಕಂಡೆ, ಆದರೆ ಆ ನಂತರ ನನಗೆ ಬೇರೆಯದೇ ಪಟ್ಟ ಕೊಟ್ಟೆ. ಒಟ್ಟಾರೆ ನಿನ್ನ ನನ್ನ ಋಣ ಇಲ್ಲಿಗೇ ಮುಕ್ತಾಯವಾಗಿತ್ತು ಎನಿಸುತ್ತದೆ. ಹಾಗಾಗಿ, ಅದು ಅಲ್ಲೇ ನಿಂತ ನೀರಾಗಿ ಬಿಟ್ಟಿತು, ಮುಂದೆ ನದಿಯಾಗಿ ಹರಿದು ಕಡಲು ಸೇರಲೇ ಇಲ್ಲ.

ಬರಹ : ಆಶಾ ಎ ಆರ್.

ವಿಶ್ವವಿದ್ಯಾಲಯ ಮಂಗಳೂರು

3 ಬಿ ಎ. ಬಿ.

SHARE
Loading spinner

Leave a Reply

Your email address will not be published. Required fields are marked *

error: Content is protected !!