ಕೆನರಾ ಕಾಲೇಜಿಗೆ ʻಸ್ವಾಯತ್ತ’ ಮಾನ್ಯತೆ, ಉದ್ಯೋಗಾಧಾರಿತ ಹೊಸ ಕೋರ್ಸ್‌ಗಳು ಶೀಘ್ರದಲ್ಲಿ ಆರಂಭ

ಮಂಗಳೂರು: ಕಳೆದ ಐದು ದಶಕಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಾ ಬಂದಿರುವ Canara Collegeಗೆ ‘ಸ್ವಾಯತ್ತತೆ’ (Autonomy) ಸ್ಥಾನಮಾನ ಲಭಿಸಿದ್ದು, 2025-26ನೇ ಶೈಕ್ಷಣಿಕ ವರ್ಷದಿಂದ ಈ ಬದಲಾವಣೆ ಜಾರಿಗೆ ಬರಲಿದೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದರು.

ನಗರದ The Ocean Pearl ಹೋಟೆಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಹರ್ಷ ವ್ಯಕ್ತಪಡಿಸಿದ Canara High School Association ಅಧ್ಯಕ್ಷ ಡಿ. ವಾಸುದೇವ ಕಾಮತ್, “1973ರಲ್ಲಿ ಸ್ಥಾಪನೆಯಾದ ನಮ್ಮ ಕಾಲೇಜು ಇಂದು Mangalore University ವ್ಯಾಪ್ತಿಯಲ್ಲಿ ಪ್ರಮುಖ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದೆ. NAACನಿಂದ 3.21 ಸಿ.ಜಿ.ಪಿ.ಎ ಮತ್ತು ‘ಎ’ ಶ್ರೇಣಿ ಪಡೆದಿರುವುದು ನಮ್ಮ ಗುಣಮಟ್ಟದ ಸಾಕ್ಷಿ. ಇದೀಗ ಸಿಕ್ಕಿರುವ ಸ್ವಾಯತ್ತ ಸ್ಥಾನಮಾನವು ನಮ್ಮ ಬದ್ಧತೆಗೆ ಸಿಕ್ಕ ಮಾನ್ಯತೆ,” ಎಂದರು.

ಗೌರವ ಕಾರ್ಯದರ್ಶಿ ಎಂ. ರಂಗನಾಥ ಭಟ್ ಮಾತನಾಡಿ, “ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವ ಹಾಗೂ ಪರಿಷ್ಕರಿಸುವ ಅಧಿಕಾರ ಈಗ ನಮಗೆ ದೊರೆತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಉದ್ಯೋಗಾಧಾರಿತ ಶಿಕ್ಷಣ ನೀಡಲು ಹೆಚ್ಚಿನ ಅವಕಾಶ ಸಿಗಲಿದೆ. 135ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯ ರ್‍ಯಾಂಕ್‌ಗಳನ್ನು ಪಡೆದಿರುವ ನಮ್ಮ ಸಾಧನೆಗೆ ಈ ಸ್ವಾಯತ್ತತೆ ಹೊಸ ಬಲ ನೀಡಲಿದೆ,” ಎಂದು ಹೇಳಿದರು.

ಜತೆ ಕಾರ್ಯದರ್ಶಿ ಟಿ. ಗೋಪಾಲಕೃಷ್ಣ ಶೆಣೈ ಸಂಸ್ಥೆಯ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡು, “ಮಾರುಕಟ್ಟೆಯ ಬೇಡಿಕೆಯನ್ನು ಗಮನದಲ್ಲಿಟ್ಟು BBA in Logistics, BCA in Data Analytics ಹಾಗೂ B.Com in Business Data Analytics ಎಂಬ ಮೂರು ಹೊಸ ಪಠ್ಯಕ್ರಮಗಳನ್ನು ಆರಂಭಿಸಲು ಪ್ರಸ್ತಾವನೆ ಸಲ್ಲಿಸಿದ್ದೇವೆ. ಡೇಟಾ ಸೈನ್ಸ್ ಹಾಗೂ ಮ್ಯಾನೇಜ್‌ಮೆಂಟ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಗುರಿ,” ಎಂದು ತಿಳಿಸಿದರು.

ಸಂಸ್ಥೆಯ ಸಂಚಾಲಕ ಹಾಗೂ ಕೋಶಾಧಿಕಾರಿ ಸಿಎ ಜಗನ್ನಾಥ ಕಾಮತ್, “ನಮ್ಮಲ್ಲಿ 1569 ವಿದ್ಯಾರ್ಥಿಗಳು ಹಾಗೂ 85 ಅರ್ಹ ಉಪನ್ಯಾಸಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ವಿದೇಶ ಹಾಗೂ ಕಾರ್ಪೊರೇಟ್ ವಲಯದಲ್ಲಿ ಉನ್ನತ ಹುದ್ದೆಗಳಲ್ಲಿ ಇರುವ ಹಳೆ ವಿದ್ಯಾರ್ಥಿಗಳು ನಮ್ಮ ಶಕ್ತಿಯಾಗಿದ್ದಾರೆ,” ಎಂದರು.

Canara Vikas College ಕೋ-ಆರ್ಡಿನೇಟರ್ ಬಸ್ತಿ ಪುರುಷೋತ್ತಮ ಶೆಣೈ ಮಾತನಾಡಿ, “ಕಳೆದ ಎರಡು ವರ್ಷಗಳಲ್ಲಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ 12 ರ್‍ಯಾಂಕ್‌ಗಳನ್ನು ಗಳಿಸಿರುವುದು ನಮ್ಮ ಸಾಧನೆಯ ಗುರುತು. ವಿಶೇಷವಾಗಿ BCA ಹಾಗೂ MCA ವಿಭಾಗಗಳ ಮೂಲಕ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗುಣಮಟ್ಟದ ಬೋಧನೆ ಹಾಗೂ ಕೈಗಾರಿಕಾ ಆಧಾರಿತ ಪಠ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗೆ ಸಜ್ಜುಗೊಳಿಸುವುದು ನಮ್ಮ ಗುರಿ,” ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕೋಶಾಧಿಕಾರಿ ಸಿಎ ಎಂ. ವಾಮನ್ ಕಾಮತ್ ಹಾಗೂ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!