ಮಂಗಳೂರು: ಮಾ.4: ಕಾರ್ಮಿಕ ವಿರೋಧಿ ಸಂಹಿತೆಗಳ ವಿರುದ್ಧ ಆಕ್ಷೇಪಣೆ ಸಲ್ಲಿಕೆ ಹಾಗೂ ಪ್ರತಿಭಟನಾ ಪ್ರದರ್ಶನವು ಇಂದು ನಗರದ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯೆದುರು ಜರುಗಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಾಯಿತ ವಿವಿಧ ಯೂನಿಯನ್ಗಳು ಹಾಗೂ ಕಾರ್ಮಿಕ ಸಂಘಟನೆಗಳ ಸದಸ್ಯರು Centre of Indian Trade Unions (CITU) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಪ್ರತ್ಯೇಕ ಮನವಿಗಳನ್ನು ಸಲ್ಲಿಸುವ ಮೂಲಕ ಕಾರ್ಮಿಕ ಸಂಹಿತೆಗಳ ವಿರುದ್ಧ ತಮ್ಮ ಆಕ್ಷೇಪಣೆಗಳನ್ನು ದಾಖಲಿಸಿದರು. ಕೇಂದ್ರ ಸರಕಾರವು ಕಾರ್ಮಿಕ ವರ್ಗವನ್ನು ಗುಲಾಮಗಿರಿಯತ್ತ ತಳ್ಳಲು ಸಂಚು ರೂಪಿಸಿದೆ ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಬಿ.ಎಂ. ಭಟ್, ಕಾರ್ಪೊರೇಟ್ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ತೊಡಗಿರುವ Narendra Modi ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಯಾವುದೇ ಪರಿಣಾಮಕಾರಿ ಯೋಜನೆಗಳನ್ನು ರೂಪಿಸುತ್ತಿಲ್ಲ ಎಂದು ಆರೋಪಿಸಿದರು. ಕಾರ್ಮಿಕ ಸಂಹಿತೆಗಳ ಜಾರಿಯಿಂದ ಕಾರ್ಮಿಕರ ಬದುಕು ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು. ಇದೇ ಸಂಹಿತೆಗಳನ್ನು ಕರ್ನಾಟಕದಲ್ಲಿ ಜಾರಿಗೊಳಿಸಲು Siddaramaiah ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿರುವುದನ್ನು ಅವರು ಟೀಕಿಸಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ವಸಂತ ಆಚಾರ್ಯ ಮಾತನಾಡಿ, ದೇಶದ 90 ಶೇಕಡಾ ಕಾರ್ಮಿಕರನ್ನು ಹೊರಗಿಟ್ಟು ರೂಪಿಸಿರುವ ಲೇಬರ್ ಕೋಡ್ ಅನ್ನು ‘ಕಾರ್ಪೊರೇಟ್ ಕೋಡ್’ ಎಂದು ಕರೆಯುವುದು ಸೂಕ್ತ ಎಂದು ವ್ಯಂಗ್ಯವಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ದೇಶದ ಕಾರ್ಮಿಕ ವರ್ಗವು ಕನಿಷ್ಠ ಮಾಸಿಕ ಕೂಲಿ ರೂ.36,000 ಆಗಿರಬೇಕು ಎಂದು ಒತ್ತಾಯಿಸುತ್ತಿರುವಾಗ, ದಿನಕ್ಕೆ ರೂ.176 ಕನಿಷ್ಠ ಕೂಲಿ ನಿಗದಿ ಮಾಡಿರುವುದು ಸಮಂಜಸವೇ ಎಂದು ಪ್ರಶ್ನಿಸಿದರು. ಈ ಕುರಿತು ಪ್ರಧಾನಿಯವರು ಸ್ಪಷ್ಟನೆ ನೀಡಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ನಾಯಕರು ಸೇರಿದಂತೆ ಜೆ. ಬಾಲಕೃಷ್ಣ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಪದ್ಮಾವತಿ ಶೆಟ್ಟಿ, ಜಯಂತ ನಾಯಕ್, ರವಿಚಂದ್ರ ಕೊಂಚಾಡಿ, ವಸಂತಿ ಕುಪ್ಪೆಪದವು, ರಾಧಾ ಮೂಡಬಿದ್ರೆ, ಗಿರಿಜಾ, ಲೋಲಾಕ್ಷಿ, ಈಶ್ವರಿ ಬೆಳ್ತಂಗಡಿ, ಪ್ರಮೋದಿನಿ, ಸಂತೋಷ್ ಆರ್.ಎಸ್., ಭವಾನಿ ವಾಮಂಜೂರು, ಪುಷ್ಪ, ವಾರಿಜಾ, ಭಾರತಿ ಬೋಳಾರ, ಜಯಲಕ್ಷ್ಮಿ, ದೇವಕಿ ಬೆಳ್ತಂಗಡಿ, ಮುಝಾಫರ್, ಇಬ್ರಾಹಿಂ ಅಂಬ್ಲಮೊಗರು, ಯಶೋಧ ಮಳಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಬಳಿಕ ಪ್ರತಿಯೊಂದು ಯೂನಿಯನ್ನ ಮುಖಂಡರು ತಮ್ಮ ಆಕ್ಷೇಪಣೆಗಳ ಮನವಿಯನ್ನು ಸಹಾಯಕ ಕಾರ್ಮಿಕ ಆಯುಕ್ತರಿಗೆ ಸಲ್ಲಿಸಿದರು.