ಉಡುಪಿ: ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ಗೂಂಡಾಗಿರಿ ಖಂಡಿಸಿ ಪ್ರತಿಭಟನೆ

ಉಡುಪಿ ಜಿಲ್ಲೆಯಲ್ಲಿ ಮಲ್ಪೆ ಬಂದರಿನಲ್ಲಿ ಶ್ರಮಿಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು. ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿ ಈ ಪ್ರತಿಭಟನೆ ನಡೆಸಲಾಯಿತು. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU), ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ಸಹಬಾಳ್ವೆ ಉಡುಪಿ ಜಿಲ್ಲೆ ಹಾಗೂ ಇತರೆ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಗೆ ನೇತೃತ್ವ ನೀಡಿದರು..

ಪ್ರತಿಭಟನೆಯಲ್ಲಿ ಮಾತನಾಡಿದ ದಲಿತ ಮುಖಂಡ ಸುಂದರ್ ಮಾಸ್ಟರ್, ಮಲ್ಪೆ ಬಂದರಿನಲ್ಲಿ ಎಲ್ಲರಿಗೂ ಸಮಾನವಾಗಿ ದುಡಿಯುವ ಹಕ್ಕಿದೆ ಎಂದು ಹೇಳಿದರು. ಕೆಲವರು ಬಂದರು ತಮ್ಮದೇ ಎಂದು ಭಾವಿಸಿ ಬಲಪ್ರಯೋಗ ಮಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದರು. ಯಾವುದೇ ಕಾರಣಕ್ಕೂ ಪಾಳೇಗಾರಿಕೆ ಮನೋಭಾವವನ್ನು ಒಪ್ಪಲಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಪ್ರೊ. ಫಣಿರಾಜ್ ಮಾತನಾಡಿ, ಈ ಹೋರಾಟವು ಸಮಾನತೆ ಮತ್ತು ಬದುಕುವ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಹೇಳಿದರು. ಶೇಖ್ ಅಯ್ಯಬ್ ಅವರ ಮೇಲೆ ನಡೆದ ದೌರ್ಜನ್ಯ ಕೇವಲ ಒಂದು ಪ್ರಕರಣವಲ್ಲ; ಇದರ ಹಿಂದೆ ರಾಜಕೀಯ ಹಿನ್ನೆಲೆಯೂ ಇದೆ ಎಂದು ಆರೋಪಿಸಿದರು.

ಲಂಬಾಣಿ ಮಹಿಳೆಯ ಮೇಲಿನ ಹಲ್ಲೆ ಪ್ರಕರಣ ನಡೆದ ಒಂದು ವರ್ಷದೊಳಗೆ ಮತ್ತೊಂದು ಘಟನೆ ವರದಿಯಾಗಿರುವುದನ್ನು ಅವರು ಉಲ್ಲೇಖಿಸಿದರು. ಆ ಪ್ರಕರಣದಲ್ಲಿ ವ್ಯಕ್ತಿಯನ್ನು ಹೊಡೆದು ಅದರ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದಾಗಿ ತಿಳಿಸಿದರು. ದಲಿತ ಸಂಘಟನೆಗಳ ಪ್ರಯತ್ನದಿಂದ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು. ಶ್ರಮಿಕರ ಮೇಲೆ ನಡೆದ ದೌರ್ಜನ್ಯವನ್ನು ಅವರು ಕೇವಲ ಅಪರಾಧ ಪ್ರಕರಣವಲ್ಲ, ಫ್ಯಾಸಿಸ್ಟ್ ದೌರ್ಜನ್ಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಲ್ಪೆ ಬಂದರು ಪ್ರದೇಶದಲ್ಲಿ ಪೊಲೀಸ್ ಹೊರ ಠಾಣೆ ಸ್ಥಾಪಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!