ಮಂಗಳೂರು ವಿಶ್ವವಿದ್ಯಾಲಯದಲ್ಲಿ 5ನೇ ರ‍್ಯಾಂಕ್‌ ಪಡೆದ ಐಷಾ: ಬರಕಾ ಸಂಸ್ಥೆಗೆ ಹೆಮ್ಮೆಯ ಕ್ಷಣ

ಆಡ್ಯಾರ್‌ನ ಬರಕಾ ಇಂಟರ್‌ನ್ಯಾಷನಲ್ ಶಾಲೆ ಹಾಗೂ ಕಾಲೇಜಿಗೆ ಮತ್ತೊಂದು ಹೆಮ್ಮೆಯ ಕ್ಷಣ ಲಭಿಸಿದೆ. ಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿನಿ ಐಷಾ ಅವರು ಮಂಗಳೂರು ವಿಶ್ವವಿದ್ಯಾಲಯದ ಬಿ.ಎ. ವಿಭಾಗದಲ್ಲಿ 5ನೇ ರ‍್ಯಾಂಕ್‌ ಗಳಿಸಿ ಸಂಸ್ಥೆಯ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದ್ದಾರೆ.ಐಷಾ ಅವರು ಅಶ್ರಫ್ ಅಲಿ ಹಾಗೂ ರಮ್ಲತ್ ದಂಪತಿಯ ಪುತ್ರಿಯಾಗಿದ್ದು, ಅಲ್ತಾಫ್ ಉಮರ್ ಅವರ ಪತ್ನಿಯಾಗಿದ್ದಾರೆ. ಈಗಾಗಲೇ ಶೈಕ್ಷಣಿಕ ಸಾಧನೆಯಲ್ಲಿ ಮೆಚ್ಚುಗೆ ಗಳಿಸಿರುವ ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲೇ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ (ಎಂ.ಎ.) ಅಭ್ಯಾಸ ಮಾಡುತ್ತಿದ್ದಾರೆ. ಅವರ ಪರಿಶ್ರಮ, ನಿಯಮಿತ ಅಧ್ಯಯನ ಹಾಗೂ ಗುರಿ ಸಾಧನೆಗೆ ಇರುವ ನಿಷ್ಠೆಯೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.

ಬರಕಾ ಪದವಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅವಧಿಯಲ್ಲಿಯೇ ಐಷಾ ಅವರು ತಮ್ಮ ಪ್ರತಿಭೆ, ಶಿಸ್ತು ಹಾಗೂಅಧ್ಯಯನಾಸಕ್ತಿಯಿಂದ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ವಿಶ್ವವಿದ್ಯಾಲಯ ಮಟ್ಟದಲ್ಲಿ ರ‍್ಯಾಂಕ್‌ ಗಳಿಸಿರುವುದು ಅವರ ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೂ ಸಾಕ್ಷಿಯಾಗಿದೆ.

ಬರಕಾ ಇಂಟರ್‌ನ್ಯಾಷನಲ್ ಶಾಲೆ ಮತ್ತು ಕಾಲೇಜು ಪ್ರೀ-ಕೆ.ಜಿ.ಯಿಂದ ಪದವಿ ಮಟ್ಟದವರೆಗೆ ಸಮಗ್ರ ಶಿಕ್ಷಣವನ್ನು ನೀಡುತ್ತಿದ್ದು, ಪ್ರತಿವರ್ಷವೂ ಶೈಕ್ಷಣಿಕ ಹಾಗೂ ಪಾಠ್ಯೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ರಾಜ್ಯ ಹಾಗೂ ವಿಶ್ವವಿದ್ಯಾಲಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಗುಣಮಟ್ಟದ ಬೋಧನೆ, ಅನುಭವಸಂಪನ್ನ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಕೇಂದ್ರೀಕೃತ ಶಿಕ್ಷಣ ವ್ಯವಸ್ಥೆಯೇ ಸಂಸ್ಥೆಯ ಯಶಸ್ಸಿನ ಮೂಲಾಧಾರವಾಗಿದೆ.

ಐಷಾ ಅವರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಚೇಯರ್ಮ್ಯಾನ್ ಅಶ್ರಫ್ ಬಜ್ಪೆ, ಪ್ರಾಂಶುಪಾಲರಾದ ಬಿ.ಎಸ್. ಶರ್ಪುದ್ದೀನ್, ಉಪನ್ಯಾಸಕರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ. ಭವಿಷ್ಯದಲ್ಲಿಯೂ ಅವರು ಇನ್ನಷ್ಟು ಉನ್ನತ ಸಾಧನೆಗಳತ್ತ ಹೆಜ್ಜೆ ಇಡಲಿ ಎಂದು ಇಸ್ಲಾಮಿಕ್ ವಿಭಾಗದ ಪ್ರಾಂಶುಪಾಲರಾದ ಮಹಮ್ಮದ್ ಹನೀಪ್ ಬೊಳಂತೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!