ಕಾಸರಗೋಡು : ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ನಟಿಸಿ 80 ವರ್ಷದ ಹಿರಿಯ ವೈದ್ಯರಿಗೆ ‘ಡಿಜಿಟಲ್ ಅರೆಸ್ಟ್’ ಬೆದರಿಕೆಯೊಡ್ಡಿ 1.19 ಕೋಟಿ ರೂಪಾಯಿ ವಂಚಿಸಿದ್ದ ಆರೋಪಿಯನ್ನು ಕಾಸರಗೋಡು ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಮಲಪ್ಪುರಂ ಮೂಲದ, ವಿದೇಶದಲ್ಲಿದ್ದ ಶಮದ್ (34) ಬಂಧಿತ ಆರೋಪಿ.
ಆರೋಪಿಯು ವೈದ್ಯರ ಮೇಲೆ ಅಕ್ರಮ ಹಣ ವರ್ಗಾವಣೆಯ ಸುಳ್ಳು ಆರೋಪ ಹೊರಿಸಿ, ರಿಸರ್ವ್ ಬ್ಯಾಂಕ್ ಪರಿಶೀಲನೆಯ ನೆಪದಲ್ಲಿ 1,19,35,000 ರೂ. ಲಪಟಾಯಿಸಿದ್ದನು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿರುದ್ಧ ‘ಲುಕೌಟ್ ನೋಟೀಸ್’ ಹೊರಡಿಸಿದ್ದರು.
ವಿದೇಶದಿಂದ ಬಂದ ಆರೋಪಿ ಸೆಪ್ಟೆಂಬರ್ 17ರಂದು ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಎಮಿಗ್ರೇಷನ್ ಅಧಿಕಾರಿಗಳ ನೆರವಿನಿಂದ ಸೈಬರ್ ಪೊಲೀಸ್ ತಂಡ ಆತನನ್ನು ಕಸ್ಟಡಿಗೆ ತೆಗೆದುಕೊಂಡಿದೆ.

ಆತನ ಬ್ಯಾಂಕ್ ಖಾತೆಗಳಲ್ಲಿ ಸುಮಾರು 55 ಲಕ್ಷಕ್ಕೂ ಹೆಚ್ಚು ಹಣ ಪತ್ತೆಯಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

