ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಿಕಾರೋಡ್‌ನ ಕಾಪಿಕಾಡು ಪ್ರದೇಶದಲ್ಲಿರುವ ಅರಣ್ಯಾಧಿಕಾರಿಯೊಬ್ಬರ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದ್ದು, ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಸೇರಿದಂತೆ ಒಟ್ಟು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೋಟೆಕಾರು ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ (35) ಅವರು ವಾಸವಿದ್ದ ಅಂಬಿಕಾರೋಡ್, ಕಾಪಿಕಾಡುವಿನ ಬಾಡಿಗೆ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಈ ಘಟನೆ ಗುರುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಮೆಹಬೂಬ್ ಸಾಬ್ ಅವರು ತಮ್ಮ ಪತ್ನಿ ಫರ್ಝಾನ ಮೆಹಬೂಬ್ ಹಾಗೂ ಪುಟ್ಟ ಮಗುವಿನೊಂದಿಗೆ ಕಳೆದ ಆರು ತಿಂಗಳುಗಳಿಂದ ಈ ಮನೆಯಲ್ಲಿ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ಅವರು ಕುಟುಂಬ ಸಮೇತ ತಮ್ಮ ಊರಾದ ಕೊಪ್ಪಳಕ್ಕೆ ತೆರಳಿದ್ದರು. ಗುರುವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕುಟುಂಬ ಸಮೇತ ಮನೆಗೆ ಮರಳಿದಾಗ ಕಳ್ಳತನ ನಡೆದಿರುವುದು ತಿಳಿದುಬಂದಿದೆ . ಮನೆಯ ಮುಖ್ಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ ಕಳ್ಳರು ಹಾಲ್ ಹಾಗೂ ಎರಡು ಕೋಣೆಗಳಲ್ಲಿದ್ದ ಕಬಾಟುಗಳನ್ನು ಜಾಲಾಡಿದ್ದಾರೆ. ಲಾಕರ್‌ಗಳಲ್ಲಿ ಇರಿಸಿದ್ದ ಪತ್ನಿ ಹಾಗೂ ಮಗುವಿನ ಚಿನ್ನದ ಆಭರಣಗಳು ಸೇರಿದಂತೆ ಸುಮಾರು 128.5 ಗ್ರಾಂ ಚಿನ್ನ ಹಾಗೂ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದ ಸುಮಾರು ಹತ್ತೂವರೆ ಲಕ್ಷ ರೂ. ನಗದು ಹಣವನ್ನು ಕಳ್ಳರು ದೋಚಿಕೊಂಡಿದ್ದಾರೆ. ಕಬಾಟಿನ ಒಂದು ಲಾಕರ್‌ನಲ್ಲಿ ಬೆಲೆಬಾಳುವ ಬೆಳ್ಳಿ ಆಭರಣಗಳಿದ್ದರೂ ಸಹ ಕಳ್ಳರು ಅದನ್ನು ಮುಟ್ಟದೇ ಬಿಟ್ಟು ಹೋಗಿರುವುದು ಗಮನಾರ್ಹವಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಿಸಿಟಿವಿ ಇಲ್ಲದ ಪ್ರದೇಶ, ಪೊಲೀಸರಿಗೆ ಸವಾಲು
ಕಾಪಿಕಾಡು ಪ್ರದೇಶದಲ್ಲಿ ಸಾಕಷ್ಟು ಮನೆಗಳಿದ್ದರೂ ಸಹ ನಿವಾಸಿಗಳು ಪರಸ್ಪರ ಸಂಪರ್ಕ ಕಡಿಮೆ ಹೊಂದಿರುವುದರಿಂದ ಕಳ್ಳತನ ಯಾವಾಗ ಮತ್ತು ಹೇಗೆ ನಡೆದಿದೆ ಎಂಬುದು ಯಾರಿಗೂ ತಿಳಿದಿಲ್ಲ. ಸ್ಥಳದ ಬಗ್ಗೆ ನಿಖರ ಮಾಹಿತಿ ಹೊಂದಿದವರೇ ಒಂಟಿ ಮನೆಯನ್ನು ಗುರುತಿಸಿ ಕಳ್ಳತನ ನಡೆಸಿರುವ ಸಾಧ್ಯತೆಯ ಬಗ್ಗೆ ಶಂಕಿಸಲಾಗಿದೆ. ಬಹುತೇಕ ಶ್ರೀಮಂತರೇ ವಾಸಿಸುವ ಈ ಪ್ರದೇಶದಲ್ಲಿ ಕಳ್ಳತನ ನಡೆದ ಮನೆ ಸೇರಿದಂತೆ ಸುತ್ತಮುತ್ತಲಿನ ಮನೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದು ಪೊಲೀಸರ ತನಿಖೆಗೆ ಸವಾಲಾಗಿ ಪರಿಣಮಿಸಿದೆ.
ಕೆಲವು ವರ್ಷಗಳ ಹಿಂದೆ ಇದೇ ಅರಣ್ಯಾಧಿಕಾರಿಯ ಮನೆಯ ಪಕ್ಕದ ಮನೆಯಲ್ಲೂ ಕಳ್ಳತನ ನಡೆದಿತ್ತು. ಅಂದು ಮನೆ ಮಂದಿ ಇಲ್ಲದ ವೇಳೆ ಒಳನುಗ್ಗಿದ ಕಳ್ಳರು ಕಳ್ಳತನ ನಡೆಸಿದ ಬಳಿಕ ಅಡುಗೆ ಕೋಣೆಯಲ್ಲಿ ಇಟ್ಟಿದ್ದ ಮೀನಿನ ಪದಾರ್ಥವನ್ನು ಊಟ ಮಾಡಿ ತೆರಳಿದ್ದ ಘಟನೆ ಕೂಡ ವರದಿಯಾಗಿತ್ತು.