ಮಂಗಳೂರು: ಕಾಟಿಪಲ್ಲ ಗಣೇಶ್‌ಪುರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ 6 ಗಂಟೆಗೆ ಸಿ.ಎಂ. ಉದಯ್ ಅವರ ಕಥೆ, ಸಂಭಾಷಣೆ, ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರಲಿರುವ ಹೊಸ ಕನ್ನಡ ಚಲನಚಿತ್ರದ ಮುಹೂರ್ತ ಪೂಜೆ ನೆರವೇರಿತು.
ಕಾರ್ಯಕ್ರಮದಲ್ಲಿ ತುಳು ಚಿತ್ರನಟ ಹಾಗೂ ರಂಗಭೂಮಿ ಕಲಾವಿದ ಭೋಜರಾಜ್ ವಾಮಂಜೂರು, ಕಾಂತರಾ ಖ್ಯಾತಿಯ ನವೀನ್ ಬೋಂದೆಲ್, ಸಿ.ಎಂ. ಉದಯ್ ಹಾಗೂ ಅವರ ಧರ್ಮಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಚಿತ್ರಕ್ಕೆ ಪ್ರಭು ದಾಸ್ ಪಿ.ಡಿ. ಸಂಗೀತ ನಿರ್ದೇಶನ ನೀಡಲಿದ್ದು, ನಿವಾಸ್ ನಾರಾಯಣ್ ಛಾಯಾಗ್ರಹಣ ವಹಿಸಿಕೊಳ್ಳಲಿದ್ದಾರೆ. ನಿರ್ಮಾಣ ನಿರ್ವಹಣೆಯನ್ನು ಲೋಕೇಶ್ ಗಾರ್ ಕೆ.ವಿ. ನಿರ್ವಹಿಸಲಿದ್ದು, ಸಂಕಲನ ಕಾರ್ಯವನ್ನು ಅರ್ಜುನ್ ಕಿಟ್ಟು, ಸುಪ್ರೀತ್ ಹಾಗೂ ಜ್ಞಾನೇಶ್ ಕೈಗೊಳ್ಳಲಿದ್ದಾರೆ. ವಸ್ತ್ರ ಅಲಂಕಾರವನ್ನು ಚಕ್ರವರ್ತಿ ಹಾಗೂ ಕಲಾ ನಿರ್ದೇಶನವನ್ನು ಶೀನ ನಿರ್ವಹಿಸಲಿದ್ದಾರೆ.
ಚಿತ್ರದ ನಾಯಕ ನಟನಾಗಿ ಸಿ.ಎಂ. ಉದಯ್ ಅಭಿನಯಿಸುತ್ತಿದ್ದು, ನಾಯಕಿಯಾಗಿ ವಂಶಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಹಿರಿಯ ಕಲಾವಿದರಾದ ಶರತ್ ಲೋಹಿತಾಶ್ವ, ಅಚ್ಚುತ್ ಕುಮಾರ್, ವಿನಯ್ ಗೌಡ, ಡ್ರ್ಯಾಗನ್ ಮಂಜು, ಯಶ್ ಶೆಟ್ಟಿ, ವರ್ಧನ್ ತೀರ್ಥಹಳ್ಳಿ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.