ಮಂಗಳೂರು: ರಾಜ್ಯ ಬಜೆಟ್ ಕುರಿತು ಶಾಸಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಮಾರ್ಚ್ 9ರಂದು ಸಂಜೆ 4 ಗಂಟೆಗೆ ಲಲಿತ್ ಅಶೋಕ್ ಸಭಾಂಗಣದಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದ್ದಾರೆ.
ಸರ್ಕ್ಯೂಟ್ ಹೌಸ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದ ಪ್ರಾಮುಖ್ಯತೆ, ರಾಜಸ್ವ ಸಂಗ್ರಹ, ಆರ್ಥಿಕ ವ್ಯವಸ್ಥೆ, ಅನುದಾನಗಳ ವರ್ಗೀಕರಣ, ವಿಗುತೆ ಬಜೆಟ್ ಹಾಗೂ ಕೊರತೆ ಬಜೆಟ್ ಸೇರಿದಂತೆ ವಿವಿಧ ವಿಷಯಗಳ ಕುರಿತು ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಶಾಸಕರಿಗೆ ಮಾಹಿತಿ ನೀಡಲಿದ್ದಾರೆ ಎಂದು ಹೇಳಿದರು.
ದೇಶದಲ್ಲಿ 17 ಬಾರಿ ಬಜೆಟ್ ಮಂಡಿಸಿರುವ ಅನುಭವ ಹೊಂದಿರುವ ಸಿದ್ದರಾಮಯ್ಯ ಅವರು ಹಣಕಾಸು ನಿರ್ವಹಣೆ ಕುರಿತು ಶಾಸಕರಿಗೆ ವಿವರವಾಗಿ ತಿಳಿಸಲಿದ್ದಾರೆ. ಶಾಸಕರಿಗೆ ಇರುವ ಸಂಶಯಗಳನ್ನು ನಿವಾರಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಇಂತಹ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, ಈ ಭಾಗದ ಶಾಸಕರಿಗೂ ಈಗಾಗಲೇ ಆಹ್ವಾನ ನೀಡಲಾಗಿದೆ ಎಂದು ಖಾದರ್ ಹೇಳಿದರು.
ಸಾಲ ಮಾಡಿ ಬಜೆಟ್ ಮಂಡಿಸಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಟೀಕೆಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು ಅಧಿವೇಶನದಲ್ಲಿ ಈ ಕುರಿತು ಚರ್ಚೆಯಾಗಲಿದೆ ಎಂದರು.
ಉಳ್ಳಾಲ ಕ್ಷೇತ್ರದಲ್ಲಿ ಹೊಸ ಪೊಲೀಸ್ ಠಾಣೆಗಳ ಅಗತ್ಯವಿದ್ದು, ನೇತ್ರಾವತಿ ನದಿ ಬದಿಯ ರಸ್ತೆ ಕಾಮಗಾರಿಗೆ ಹೆಚ್ಚುವರಿ ಅನುದಾನ ಮಂಜೂರಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ 10 ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ಗಳಿಗೆ ಮಂಜೂರಾತಿ ನೀಡಲಾಗಿದ್ದು, ಜಿಲ್ಲೆಯಲ್ಲಿ ಒಂದು ಕೇಂದ್ರ ಸ್ಥಾಪನೆಗಾಗಿ ಬೇಡಿಕೆ ಇಡಲಾಗಿದೆ. ಇದರಿಂದ ಯುವಕರಿಗೆ ಪ್ರಾಯೋಗಿಕ ಕೌಶಲ್ಯ ಹಾಗೂ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ ಎಂದು ಅವರು ಹೇಳಿದರು.