ಉಡುಪಿ: ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ ಅಂಗಸಂಸ್ಥೆ ಬಿಲ್ಲಾಡಿ ಆತ್ಮಾನಂದ ಸರಸ್ವತಿ ಕೈಗಾರಿಕಾ ತರಬೇತಿ ಕೇಂದ್ರದ ವತಿಯಿಂದ ಮಾ.17ರಂದು ಉಡುಪಿಯ ಅಮೃತ್ ಗಾರ್ಡನ್ನಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಹಾಗೂ ಗೌರವಾಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಬನ್ನಂಜೆಯ ಶ್ರೀ ನಾರಾಯಣಗುರು ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕೌಶಲ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವಿಭಾಗೀಯ ಕಚೇರಿಯ ಸಹಯೋಗದಲ್ಲಿ ಈ ಮೇಳ ನಡೆಯಲಿದೆ ಎಂದರು.
ಮೇಳದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 9 ಗಂಟೆಗೆ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಬಳಿಕ ಅಪ್ರೆಂಟಿಶಿಪ್ ಹಾಗೂ ಉದ್ಯೋಗ ಮೇಳ ಆರಂಭವಾಗಲಿದ್ದು, ಇದಕ್ಕಾಗಿ ಪ್ರತ್ಯೇಕ ನೋಂದಣಿ ವ್ಯವಸ್ಥೆ ಮಾಡಲಾಗಿದೆ.
ಸುಮಾರು 80 ರಿಂದ 100ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು, 1,500 ರಿಂದ 2,000 ಉದ್ಯೋಗಾಕಾಂಕ್ಷಿಗಳು ಪಾಲ್ಗೊಳ್ಳುವ ಸಾಧ್ಯತೆ ಇದೆ. ಕೆಲವು ಸಂಸ್ಥೆಗಳು ಅಲ್ಲಿಯೇ ಉದ್ಯೋಗ ನೇಮಕಾತಿ ಪತ್ರ ನೀಡಲು ಸಹ ಒಪ್ಪಿಕೊಂಡಿರುವುದಾಗಿ ರಘುಪತಿ ಭಟ್ ತಿಳಿಸಿದ್ದಾರೆ.
ಅಪ್ರೆಂಟಿಶಿಪ್ಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉತ್ತಮ ಗೌರವಧನ ದೊರೆಯಲಿದ್ದು, ಕೇಂದ್ರ ಸರ್ಕಾರದಿಂದ ಪ್ರತಿ ಅಭ್ಯರ್ಥಿಗೆ ನಿರ್ದಿಷ್ಟ ಅನುದಾನವನ್ನು ಸಂಸ್ಥೆಗೆ ನೀಡಲಾಗುತ್ತದೆ. ತರಬೇತಿ ಅವಧಿ ನಂತರ ಸಂಸ್ಥೆಯಲ್ಲೇ ಶಾಶ್ವತ ಉದ್ಯೋಗ ಪಡೆಯುವ ಅವಕಾಶವೂ ಹೆಚ್ಚು ಇರುತ್ತದೆ ಎಂದು ಹೇಳಿದರು.
ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವಿದೇಶಗಳಲ್ಲಿ ಉದ್ಯೋಗ ಪಡೆಯಲು ಕೇವಲ ಪ್ರಮಾಣಪತ್ರವಷ್ಟೇ ಅಲ್ಲದೆ ಕೌಶಲತೆಗೂ ಹೆಚ್ಚಿನ ಮಹತ್ವವಿದೆ. ಅಪ್ರೆಂಟಿಶಿಪ್ ಮೂಲಕ ಒಂದು ವರ್ಷದ ತರಬೇತಿ ಹಾಗೂ ಸ್ಟೈಫಂಡ್ ದೊರೆಯಲಿದ್ದು, ಯುವಕರಿಗೆ ಇದು ಉತ್ತಮ ಅವಕಾಶವಾಗಲಿದೆ ಎಂದರು. ಈ ಮೇಳದ ಮೂಲಕ 2,000ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ಮಹೇಶ್ ಠಾಕೂರ್, ಪ್ರಮುಖರಾದ ರಮೇಶ್ ಕಾಂಚನ್, ರಘುನಾಥ ಮಾಬೆನ್, ಭಾಸ್ಕರ ಸುವರ್ಣ, ಸುಧಾಕರ ಅಮೀನ್, ರೂಪೇಶ್ ಕುಮಾರ್, ಓಬು ಪೂಜಾರಿ, ಗಣನಾಥ ಎಕ್ಕಾರ್ ಹಾಗೂ ಪ್ರವೀಣ್ ಎಂ. ಪೂಜಾರಿ ಉಪಸ್ಥಿತರಿದ್ದರು.