ಮಂಗಳೂರು ವಿವಿಯಲ್ಲಿ ಸಾಧಕರಿಗೆ ‘ಯಕ್ಷಮಂಗಳ’ ಪ್ರಶಸ್ತಿ ಪ್ರದಾನ

ಕೊಣಾಜೆ: ಯಕ್ಷಗಾನವು ಹಲವು ಕಲೆಯ ಸಮನ್ವಯದಿಂದ ರೂಪುಗೊಂಡ ಸಮೃದ್ಧ ಪರಂಪರೆಯ ಕಲೆ ಆಗಿದ್ದರೂ, ಅದರ ಕಲಾವಿದರ ಜೀವನ ಮಾತ್ರ ಇನ್ನೂ ಸಂಕಷ್ಟದಲ್ಲಿಯೇ ಇದೆ. ಕಲಾವಿದರಿಗೆ ಸರ್ಕಾರದಿಂದ ಸಮಗ್ರ ಯೋಜನೆಗಳ ಮೂಲಕ ಆರ್ಥಿಕ ರಕ್ಷಣೆ ದೊರಕಬೇಕು ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಾಯೋಜಕರಾದ ಡಾ. ಪಿ. ದಯಾನಂದ ಪೈ ಅಭಿಪ್ರಾಯಪಟ್ಟರು.

ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಹಾಗೂ ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ 2025–26ನೇ ಸಾಲಿನ ‘ಯಕ್ಷಮಂಗಳ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ (ಅವರ ಅನುಪಸ್ಥಿತಿಯಲ್ಲಿ ಸಹೋದರ ಮಹಾಬಲ ಹೆಗಡೆ), ಯಕ್ಷಗಾನ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರಿಗೆ ‘ಯಕ್ಷಮಂಗಳ’ ಪ್ರಶಸ್ತಿ ಹಾಗೂ ಕೃಷ್ಣಪ್ರಕಾಶ್ ಉಳಿತ್ತಾಯ ಅವರಿಗೆ ಕೃತಿ ಪ್ರಶಸ್ತಿಯನ್ನು ಪ್ರದಾನಿಸಿದರು.

ಡಾ. ದಯಾನಂದ ಪೈ ಮಾತನಾಡಿ, “ನಾನು ಹಲವಾರು ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡುತ್ತಾ ಬಂದಿದ್ದೇನೆ. ಹಣ ಸಂಪಾದನೆ ಮಾಡುತ್ತಾ ಹೋಗುವುದು ಮಾತ್ರ ಶ್ರೀಮಂತಿಕೆ ಅಲ್ಲ; ದೇವರು ಕೊಟ್ಟದ್ದನ್ನು ಸಮಾಜಕ್ಕೆ ಹಿಂತಿರುಗಿಸುವುದು ನಿಜವಾದ ಸೇವೆ,” ಎಂದು ಹೇಳಿದರು. ಯಕ್ಷಗಾನ ನಮ್ಮ ನಾಡಿನ ವಿಶಿಷ್ಟ ಕಲೆಯಾಗಿದ್ದು, ಮಂಗಳೂರು ಮಣ್ಣಿನೊಂದಿಗೆ ತನ್ನಿಗಿರುವ ಅವಿನಾಭಾವ ಸಂಬಂಧವನ್ನು ಅವರು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಮಾತನಾಡಿ, ಹಿಂದಿನ ಮಂಗಳೂರು ಸರಕಾರಿ ಕಾಲೇಜು ವಿಶ್ವವಿದ್ಯಾಲಯ ಕಾಲೇಜಾಗಿ ರೂಪುಗೊಂಡ ನಂತರ ಕಳೆದ ಕೆಲವು ವರ್ಷಗಳಲ್ಲಿ ಸಂಭವಿಸಿದ ಕೆಲವು ಪ್ರಮಾದಗಳಿಗೆ ಕ್ಷಮೆ ಕೋರಿ, ಕಾಲೇಜಿನ ಹಳೆಯ ವೈಭವವನ್ನು ಮರಳಿ ತರುವ ಯೋಜನೆ ರೂಪಿಸಲಾಗುತ್ತಿದೆ ಎಂದರು. ಮುಂದಿನ ಶೈಕ್ಷಣಿಕ ವರ್ಷದಿಂದ ಯಕ್ಷಗಾನಕ್ಕೂ ಭರತನಾಟ್ಯದಂತೆಯೇ ವಿಶೇಷ ಪರೀಕ್ಷಾ ವ್ಯವಸ್ಥೆ ಜಾರಿಗೆ ತಂದು, ಅದಕ್ಕೆ ಶೈಕ್ಷಣಿಕ ಆಯಾಮ ನೀಡುವ ಚಿಂತನೆ ನಡೆಯುತ್ತಿದೆ ಎಂದು ಹೇಳಿದರು.

ಹಾವೇರಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡುತ್ತಾ, ಪ್ರಶಸ್ತಿ ಪುರಸ್ಕೃತರು ಯಕ್ಷಗಾನದ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಮಹತ್ವದ ಕಲಾವಿದರೆಂದು ಕೊಂಡಾಡಿದರು. ಡಾ. ದಯಾನಂದ ಪೈ ಅವರು ಕಲೆ, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಗಳನ್ನು ಅವರು ಪ್ರಶಂಸಿಸಿದರು.

ಸಮಾರಂಭದಲ್ಲಿ ಡಾ. ಪಿ. ದಯಾನಂದ ಪೈ ಅವರ ಪತ್ನಿ ಮೋಹಿನಿ ದಯಾನಂದ ಪೈ, ಮಂಗಳೂರು ವಿವಿ ಕುಲಸಚಿವ ಪ್ರೊ. ಗಣೇಶ್ ಸಂಜೀವ್, ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಉಪಸ್ಥಿತರಿದ್ದರು.
ಡಾ. ಶಶಿರೇಖಾ, ಯಕ್ಷಗುರು ದೀವಿತ್ ಕೋಟ್ಯಾನ್ ಹಾಗೂ ಡಾ. ಶ್ರೀದೇವಿ ಕಲ್ಲಡ್ಕ ಅವರು ಸನ್ಮಾನ ಪತ್ರ ವಾಚಿಸಿದರು. ಪ್ರಶಸ್ತಿ ಪುರಸ್ಕೃತರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಜಬ್ಬಾರ್ ಸಮೊ ಹಾಗೂ ಕೃಷ್ಣಪ್ರಕಾಶ್ ಉಳಿತ್ತಾಯ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.

ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ ಕುಂಬ್ಳೆ ಸ್ವಾಗತಿಸಿದರು. ಸಂಶೋಧನಾಧಿಕಾರಿ ಡಾ. ಸತೀಶ್ ಕೊಣಾಜೆ ವಂದಿಸಿದರು. ಕಲಾವಿದೆ ಸಾಯಿಸುಮ ನಾವಡ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ವಿಶೇಷತೆ ಎಂದರೆ ನಿರೂಪಣೆ, ಸನ್ಮಾನ ಮತ್ತು ಗಾನ ಅಭಿನಂದನೆಗಳನ್ನೆಲ್ಲ ಯಕ್ಷಗಾನ ಶೈಲಿಯಲ್ಲೇ ನಡೆಸಲಾಗಿದ್ದು, ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!