ಉಡುಪಿ: ಸಮಾಜದಲ್ಲಿ ಕಷ್ಟದಲ್ಲಿರುವ ವ್ಯಕ್ತಿಗಳ ನೋವಿಗೆ ದನಿಯಾದವರ ಕಷ್ಟಕ್ಕೆ ಸ್ಪಂದನೆ ತೋರುವುದು ಮಾನವೀಯತೆಯಾಗಿದೆ. ಅಂತಹ ಮಾನವೀಯ ಸೇವೆಯನ್ನು ದೇವರು ಕೂಡ ಮೆಚ್ಚುತ್ತಾರೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರುಗಳಾದ ವಂ|ಡೆನಿಸ್ ಡೆಸಾ ಹೇಳಿದರು.
ಅವರು ಭಾನುವಾರ ಸಂಜೆ ಚರ್ಚಿನ ಆವರಣದಲ್ಲಿ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರಿಗೆ ಮಂಗಳೂರಿನ ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸುಮಾರು ರೂ 7 ಲಕ್ಷ ವೆಚ್ಚದಲ್ಲಿ ಕೊಡಲಾದ ನೀರಿನಡಿ ಮುಳುಗಿ ಜೀವರಕ್ಷಣೆ ಮಾಡುವಾಗ ಉಪಯೋಗಿಸುವ ಸಂವಹನ ಸಾಧನವನ್ನು ಹಸ್ತಾಂತರಿಸಿ ಮಾತನಾಡಿದರು.
ಈಶ್ವರ್ ಮಲ್ಪೆ ಅವರು ರಾಜ್ಯದ ವಿವಿಧ ಭಾಗಗಳಲ್ಲಿ ನೀರಿನಲ್ಲಿ ಮುಳುಗಿದವರ ರಕ್ಷಣೆ ಕಾರ್ಯದ ಮೂಲಕ ಸಮಾಜದ ನೋವಿನಲ್ಲಿರುವವರ ಕಣ್ಣೀರು ಒರೆಸುವ ಕೆಲಸ ಮಾಡಿಕೊಂಡು ಬಂದಿರುತ್ತಾರೆ. ಇಂತಹ ಕಾರ್ಯಕ್ಕೆ ಸೂಕ್ತ ಆಧುನಿಕ ಸಾಧನಗಳಿಲ್ಲದೆ ಕೆಲವೊಮ್ಮೆ ಅವರ ವೈಯುಕ್ತಿಕ ಜೀವಕ್ಕೂ ಅಪಾಯ ಉಂಟಾಗಿದ್ದು ಅವರ ಸೇವೆಯನ್ನು ಗಮನಿಸಿದ ಮೈಕಲ್ ಡಿಸೋಜಾ ಅವರು ನೀರಿನಡಿಯಲ್ಲಿ ಇದ್ದಾಗ ಮೇಲೆ ಇರುವವರ ಜೊತೆಗೆ ಸಂವಹನ ಸಾಧಿಸುವ ಸಾಧನವನ್ನು ನೀಡಿದ್ದಾರೆ. ಈ ಮೂಲಕ ಅವರು ಇನ್ನಷ್ಟು ಜೀವಗಳನ್ನು ರಕ್ಷಿಸುವಂತಾಗಲಿ. ಅವರು ವಾಸಿಸುವ ಮನೆ ಹಳೆಯದಾಗಿದ್ದು ಹೊಸ ಮನೆ ನಿರ್ಮಾಣಕ್ಕೂ ಕೂಡ ಮೈಕಲ್ ಡಿಸೋಜಾ ಅವರು ಮುಂದಿನ ದಿನಗಳಲ್ಲಿ ಸಹಾಯ ಹಸ್ತವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಈಶ್ವರ್ ಮಲ್ಪೆ ನೀರಿಗೆ ಬಿದ್ದವರ ದೇಹ ತೆಗೆಯಲು 30 ರಿಂದ 40 ಅಡಿ ಆಳಕ್ಕೆ ತೆರಳಿದಾಗ ಮೇಲೆ ಇದ್ದವರ ಜೊತೆಗೆ ಸಂಪರ್ಕ ಮಾಡಲು ಹಗ್ಗದ ವ್ಯವಸ್ಥೆ ಮೂಲಕ ಮಾಡಲಾಗುತ್ತದೆ. ಈ ವೇಳೆ ನನ್ನ ಜೀವಕ್ಕೆ ಅಪಾಯವಾದ ಹಲವಾರು ನಿದರ್ಶನಗಳಿವೆ. ನೀರಿಗೆ ಬಿದ್ದ ವ್ಯಕ್ತಿಗಳ ಜಾತಿ ಧರ್ಮ ನೋಡದೆ ಮೊದಲು ಅವರನ್ನು ಬದುಕಿಸುವ ಪ್ರಯತ್ನ ನಮ್ಮದು. ಇಂತಹ ಕೆಲಸ ಮಾಡುವಾಗ ಜನರ ಪ್ರಾರ್ಥನೆ ಮತ್ತು ಹಾರೈಕೆಯಿಂದ ಸುರಕ್ಷಿತವಾಗಿ ನಾವು ಮತ್ತೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಿದೆ. ಮೈಕಲ್ ಡಿಸೋಜಾ ಅವರ ಹೃದಯ ವೈಶಾಲ್ಯತೆಯಿಂದ ನೀರಿನ ಆಳದಲ್ಲಿ ಇದ್ದರೂ ಮೇಲೆ ನಿಂತಿರುವ ಜನರೊಂದಿಗೆ ಮಾತನಾಡುವ ಸಾಧನ ನಮ್ಮ ತಂಡಕ್ಕೆ ಲಭಿಸಿದೆ ಅದಕ್ಕಾಗಿ ಪ್ರತಿಯೊಬ್ಬರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಮೈಕಲ್ ಡಿಸೋಜಾ ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಒಸ್ವಲ್ಡ್ ರೊಡ್ರಿಗಸ್ ಮಾತನಾಡಿ ಜೀವದ ಹಂಗನ್ನು ತೊರೆದು ಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಈಶ್ವರ್ ಮಲ್ಪೆಯವರ ಮನವಿಗೆ ಸ್ಪಂದಿಸಿದ್ದು ನಮಗೆ ಅತ್ಯಂತ ಪುಣ್ಯದ ಕಾರ್ಯವಾಗಿದೆ. ಈ ಸಾಧನದ ಮೂಲಕ ಇನ್ನಷ್ಟು ಕಷ್ಟದಲ್ಲಿರುವವರ ನೆರವಿಗೆ ಉಪಯೋಗಿಸುವಂತಾಗಲಿ ಎಂದರು.
ಈ ವೇಳೆ ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ಆಲ್ವಿನ್ ಸಿಕ್ವೇರಾ, ಸ್ಥಳೀಯ ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಶ್ಮಾ, ಚಾರಿಟೇಬಲ್ ಟ್ರಸ್ಟಿನ ಸದಸ್ಯರಾದ ಸ್ವೀವನ್ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಲವೀನಾ ಫೆರ್ನಾಂಡಿಸ್, 20 ಆಯೋಗಗಳ ಸಂಚಾಲಕಿ ಶಾಂತ ಫೆರ್ನಾಂಡಿಸ್, ಚರ್ಚಿನ ಸ್ತ್ರೀ ಸಂಘಟನೆ ಅಧ್ಯಕ್ಷರಾದ ಪ್ರೀಯಾ ರೊಡ್ರಿಗಸ್, ಈಶ್ವರ್ ಮಲ್ಪೆ ತಂಡದ ಸದಸ್ಯರು ಉಪಸ್ಥಿತರಿದ್ದರು.
ಬಾಕ್ಸ್ ಐಟಮ್
ಸಾಮಾಜಿಕ ಜಾಲತಾಣ ಯೂಟ್ಯೂಬ್ ಮೂಲಕ ಈಶ್ವರ್ ಮಲ್ಪೆ ಅವರ ಸೇವೆಯನ್ನು ಗಮನಿಸಿದ ಮೈಕಲ್ ಡಿಸೋಜಾ ಅವರು ಟ್ರಸ್ಟಿನ ಸದಸ್ಯರಾದ ಒಸ್ವಲ್ಡ್ ರೊಡ್ರಿಗಸ್ ಮತ್ತು ಸ್ಟೀವನ್ ಪಿಂಟೊ ಹಾಗೂ ವಂ|ಡೆನಿಸ್ ಅವರನ್ನು ಈಶ್ವರ್ ಅವರ ಮನೆಗೆ ಕಳುಹಿಸಿ ಅವರ ಮನೆಯ ಪರಿಸ್ಥಿತಿಯನ್ನು ಅವಲೋಕಿಸಲು ತಿಳಿಸಿದ್ದರು. ನೀರಿನಡಿಯಲ್ಲಿ ಇದ್ದಾಗ ಸಂವಹನ ಮಾಡುವ ಸಾಧನ ಅವರ ತುರ್ತು ಅವಶ್ಯಕತೆ ಎಂದು ಮನಗಂಡು ಕೂಡಲೇ ಅದಕ್ಕೆ ನೆರವು ನೀಡಿದ್ದು ಮುಂದಿನ ದಿನಗಳಲ್ಲಿ ಈಶ್ವರ್ ಅವರ ಮನೆ ನಿರ್ಮಾಣಕ್ಕೆ ಕೂಡ ನೆರವು ನೀಡುವ ಭರವಸೆ ನೀಡಿದ್ದಾರೆ.