ಮಂಗಳೂರು: ಮುಂದಿನ ತಲೆಮಾರಿಗೆ ನಮ್ಮ ಧಾರ್ಮಿಕತೆಯ ಸಾರವನ್ನು ತಿಳಿಸುವ ಮತ್ತು ಶುದ್ಧ ಕನ್ನಡದ ಅಸ್ತಿತ್ವಕ್ಕೆ ತನ್ನದೇ ಕೊಡುಗೆಯನ್ನು ನೀಡುತ್ತಿರುವ ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹುಟ್ಟಿಕೊಂಡ ರಂಗಸ್ಥಳ ಮಂಗಳೂರು ಸಂಘ ಇದರ ೧೧ ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ ರಾವಣನ ಜನನದಿಂದ ರಾವಣ ವಧಾವರೆಗಿನ ಸಮಗ್ರ ರಾವಣನ ಕಥೆಯನ್ನು ಒಳಗೊಂಡ ”ಪ್ರಚಂಡ ಲಂಕೇಶ್ವರ ” ಯಕ್ಷಗಾನ ಬಯಲಾಟವು ಮಾರ್ಚ್ ೧೪ ರಂದು ಸಂಜೆ ೭ ರಿಂದ ಕದ್ರಿ ಶ್ರೀ ದೇವಳದ ರಾಜಾಂಗಣದಲ್ಲಿ ನಡೆಯಲಿದೆ ಎಂದು ರಂಗಸ್ಥಳ ಮಂಗಳೂರು ಸಂಘದ ಅಧ್ಯಕ್ಷರಾದ ದಿನೇಶ್ ಪೈ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಕಳೆದ ೧೦ ವರ್ಷಗಳಿಂದ ತೆಂಕು ಬಡಗಿನ ಯಕ್ಷಗಾನ ಕಲೆಗೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದೇವೆ . ಮಂಗಳೂರನ್ನು ಕೇಂದ್ರವಾಗಿರಿಸಿ ಮೂಡಬಿದ್ರೆ , ಬ್ರಹ್ಮಾವರ , ಸಾಸ್ತಾನ ಸ್ಥಳಗಳಲ್ಲಿಯೂ ಯಕ್ಷಗಾನವನ್ನು ಮಾಡಲಾಗಿದೆ . ಸಂಸ್ಥೆಯು ೨೦ ಕ್ಕೂ ಹೆಚ್ಚು ಯಕ್ಷ ಆಟ ಕೂಟ ಏರ್ಪಡಿಸಿ ಕಲೆಗೆ ಹೆಚ್ಚಿನ ಬೆಲೆಯನ್ನು ನೀಡುವ ಜೊತೆಗೆ ಯಕ್ಷ ಕಲಾವಿದರಿಗೆ ಸನ್ಮಾನ , ಬಡ ಯಕ್ಷಗಾನ ಕಲಾವಿದರ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ನೀಡಿರುವುದಾಗಿ ಅವರು ತಿಳಿಸಿದರು .
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಸ್ಥಾಪಕ ಸದಸ್ಯರಾದ ಎಸ್ ಎಲ್ ನಾಯಕ್ , ಖಜಾಂಜಿ ಎ ಎಸ್ ಭಟ್ ಉಪಸ್ಥಿತರಿದ್ದರು .