ಬದುಕೇ ಭಾರವಾಯಿತು, ಹುಮ್ಮಸೆ ಬರಿದಾಯಿತ್ತು, ಕನಸೇ ಕಗ್ಗತ್ತಲಾಯಿತ್ತು, ಹಗಲಿರುಳೇ ಬೇಡವಾಯಿತೆಂದು ಅದೆಷ್ಟೋ ಮಂದಿ ಬದುಕಿನಲ್ಲಿ ಎಲ್ಲವೂ ಮುಗಿದೇ ಹೋಯಿತು ಎಂದು ವ್ಯಥೆ ಪಡುತ್ತಾ ಇರುತ್ತಾರೆ. ವ್ಯಥೆ ಪಡುವ ಮನಸಿನ ಜೊತೆ ಆಳವಾದ ಮಾತು ಬೇರೆಯವರ ಜೊತೆ ಮಾತನಾಡದೆ ಮೌನದಿಂದ ಇರಲು ಬಯಸುತ್ತಾರೆ. ಏಕಾಂತ ಜೀವನವನ್ನು ತುಸು ಹೆಚ್ಚೇ ಇಷ್ಟ ಪಡುತ್ತಾ ಇರುತ್ತಾರೆ.
ಶರವೇಗದಲ್ಲಿ ಆಲೋಚನೆ ತನ್ನತ್ತ ಸುಳಿದು ಬಾಳಿನ ಪಥದ ಹಾದಿಯನ್ನೇ ಬದಲಾಯಿಸುತ್ತಾ ಇರುತ್ತದೆ. ಋಣಾತ್ಮಕ ಚಿಂತೆಗಳು ಸಂತೆಗಳಂತೆ ಕಂತೆಗಳಂತೆ ಆಗಾಗೇ ಬರುತ್ತಾ ಬಂದು ಆಳವಾಗಿ ಗಾಯಮಾಡುತ್ತಾ ಹೋಗುತ್ತದೆ. ಮುಂದಿನ ಹಾದಿಯೇ ಕಾಣದಿದ್ದಾಗ ದಿಕ್ಕೇ ತೋಚದಿದ್ದಾಗ ಶಾಶ್ವತವಾಗಿ ಕಣ್ಣನ್ನು ಮುಚ್ಚುವ ಚಿಂತೆಯತ್ತ ಮನಸು ಮೆಲುಕುಹಾಕುತ್ತದೆ. ಧೈರ್ಯವು ದುಃಖದಿಂದ ಮರೆಯಾಗುತ್ತದೆ. ಹುಮ್ಮಸ್ಸು ವ್ಯಥೆಯಿಂದ ದೂರವಾಗಿ ಬಿಡುತ್ತದೆ . ಇನ್ನು ನಾಳೆ ಬದುಕಬೇಕೆನ್ನುವ ಆಸೆಗಿಂತ ಆ ಕ್ಷಣ ನಿರಾಸೆಯೇ ಕಾಡುತ್ತಿರುತ್ತದೆ.
ಹೀಗೆ ಕಾಡುವ ನೋಡುವ ನಾನಾ ಯಕ್ಷ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮಾನವ ಸಾವಿಗೆ ಕೋರಲೊಡ್ಡುತ್ತಾನೆ. ಎಷ್ಟೇ ಹಣ ಇದ್ದರೂ ಸಂಪತ್ತಿನ ಖಜಾನೆಯ ಮೇಲೆ ಖಜಾನೆಯ ಅಟ್ಟಿ ಕಟ್ಟಿದ್ದರು ಕೂಡ ಆತ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮ ಹತ್ಯೆಗೆ ಶರಣಾಗುತ್ತಾನೆ . ಎಷ್ಟೋ ಮಂದಿ ಹೇಳುವುದುಂಟು ಹಣವಿದ್ದರೆ ಎಲ್ಲವನ್ನೂ ಪಡೆಯಬಹುದು ಎಂದು . ಆದರೆ ಅದು ನೂರಕ್ಕೆ ನೂರರಷ್ಟು ತಪ್ಪು. ಹಣ ಇದ್ದರೆ ಎಲ್ಲವನ್ನೂ ಪಡೆಯಬಹುದು ಆದರೆ ನೆಮ್ಮದಿಯನ್ನಲ್ಲ ….!.
ನೆಮ್ಮದಿಯ ಬಾಳನ್ನು ಸಾಗಿಸುವುದು ಕೂಡ ಒಂದು ಕಲೆಯಾಗಿದೆ. ಆತ ಬದುಕಿಗೆ ಬೆಲೆಯನ್ನು ಕೊಡುವ ಖಿನ್ನತೆ ಗಳಿದ್ದರೂ ಅದನ್ನು ಧೈರ್ಯದಿಂದ ಎದುರಿಸುವ , ಸಮಸ್ಯೆ ಅದು ಸಮಸ್ಯೆ ಅಲ್ಲವೆಂದು ಭಾವಿಸಿ ಬದುಕನ್ನು ಛಲದಿಂದ ಸಾಗಿಸುವ ಚಲಗಾರನಾಗಿರುತ್ತಾನೆ. ಆತ ಸಮಸ್ಯೆಗಳಿಗೆ ವಿಚಲನಾಗನು ಎಂದೆಂದೂ.ಸಮಸ್ಯೆಗಳಿಗೆ ಸಾವೇ ಉತ್ತರವಾಗಿದ್ದರೆ ಈ ಜಗತ್ತಿನಲ್ಲಿ ಎಲ್ಲರೂ ಅಲ್ಪಾಯುಷಿಗಳೇ ಆಗಿರುತ್ತಿದ್ದರು. ಎದುರಾದರೆ ಸಮಸ್ಯೆ ಆತ್ಮ ಹತ್ಯೆಗೆ ಯತ್ನಿಸಬೇಡಿ ಸಮಸ್ಯೆಯ ಬಗೆಹರಿಸುವತ್ತ ಆತ್ಮ ಸ್ಥೈರ್ಯವನ್ನು ಬೆಳೆಸಿ.
ಉತ್ತರ ಇಲ್ಲದ ಪ್ರಶ್ನೆ, ಪರಿಹಾರವಾಗದ ಸಮಸ್ಯೆ ಯಾವುದು ಇಲ್ಲ . ಅದನ್ನು ವಿವೇಕ ವಂತರಾಗಿ ಎದುರಿಸಿ. ಆತ್ಮ ವಿಶ್ವಾಸದಿಂದ ಎಲ್ಲವನ್ನೂ ಎದುರಿಸಿ ಅದು ಬಿಟ್ಟು ಆತ್ಮ ಹತ್ಯೆ ಎಲ್ಲದಕ್ಕೂ ಉತ್ತರವಲ್ಲ. ಧೈರ್ಯಂ ಸರ್ವತ್ರ ಸಾಧನಂ.
ಬರವಣಿಗೆ : ಗಿರೀಶ್ ಪಿಎಂ ಕಾಸರಗೋಡು