ಗುವೇದಪಡ್ಪು: ಪ್ರೇರಣಾ ಸಾರ್ವಜನಿಕ ಗ್ರಂಥಾಲಯ ಗುವೇದಪಡ್ಪು ಇದರ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷೆ ಶ್ರೀಕುಮಾರಿ ಟೀಚರ್ ಉದ್ಘಾಟಿಸಿ ಮಾತನಾಡಿ, ಸಶಕ್ತ ಹಾಗೂ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯುತ್ತಿದ್ದು, ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಮುಂದಕ್ಕೆ ಸಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಗ್ರಂಥಾಲಯದ ಸದಸ್ಯೆ ಶ್ರೀಮತಿ ಸರಸ್ವತಿ ಕೊಣಿಬೈಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಂದ್ರಿಕಾ ಟೀಚರ್, ಆಶಾ ವರ್ಕರ್ಗಳಾದ ಮಮತಾ ಮುಗುಳಿ, ಜಮಿಲ ಗುವೇದಪಡ್ಪು, ಚೈತ್ರ ಟೀಚರ್ ಬಗಂಬಿಲ, ಚಿತ್ರಾಕ್ಷಿ ಕತ್ತೇರಿಕೋಡಿ, ಜಬ್ಬಾರ್ ಮಾಸ್ತರ್, ಗ್ರಂಥಾಲಯದ ಉಪಾಧ್ಯಕ್ಷ ಚಂದ್ರಹಾಸ ಕತ್ತೇರಿಕೋಡಿ ಹಾಗೂ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಶ್ರೀಕುಮಾರಿ ಟೀಚರ್ (ಸ್ಕೌಟ್ & ಗೈಡ್ನಲ್ಲಿ ಮೆಡಲ್ ಆಫ್ ಮೆರಿಟ್ ಪ್ರಶಸ್ತಿ), ಕೀರ್ತನಾ ಕತ್ತೇರಿಕೋಡಿ (ಗೈಡ್ನಲ್ಲಿ ರಾಜ್ಯಮಟ್ಟದ ಪ್ರಶಸ್ತಿ), ಜಮ್ಶಿರ್ (ಕಲಾ ಕ್ಷೇತ್ರ), ಅಂಕಿತಾ ಕೊಡ್ಲಮೊಗರು (ತಮಿಳು ಕಂಠಪಾಠ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ) ಹಾಗೂ ಪ್ರೀತಮ್ ಕೊಣಿಬೈಲ್ (ಸಾಂಸ್ಕೃತಿಕ ಕ್ಷೇತ್ರ) ಅವರನ್ನು ಸನ್ಮಾನಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ರಸಪ್ರಶ್ನೆ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕಿಯರ ಫೋಟೋ ಪ್ರದರ್ಶನವೂ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ವಿಶೇಷವೆಂದರೆ ಮಹಿಳಾ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮದ ಸಂಪೂರ್ಣ ನೇತೃತ್ವವನ್ನು ಮಹಿಳೆಯರೇ ವಹಿಸಿದ್ದರು.
ಲಾವಣ್ಯ ಗುವೇದಪಡ್ಪು ಸ್ವಾಗತಿಸಿದರು. ಗ್ರಂಥಪಾಲಕಿ ಜಯಶ್ರೀ ಕೊಡ್ಲಮೊಗರು ವಂದಿಸಿದರು. ಕಾರ್ಯಕ್ರಮವನ್ನು ರುಕ್ಷಾನ ಗುವೇದಪಡ್ಪು ನಿರೂಪಿಸಿದರು.