ಉಳ್ಳಾಲ: ಮಾ.11ಕಳೆದ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿ ನಾಪತ್ತೆಯಾಗಿದ್ದ ಕೊಣಾಜೆಯ ಯುವಕನೊಬ್ಬನ ಶವವು ಇಂದು ಬೆಳಿಗ್ಗೆ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪತ್ನಿಯಿಂದ ವಿಚ್ಛೇದನಗೊಂಡಿದ್ದ ಖಿನ್ನತೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಉಳ್ಳಾಲ ತಾಲೂಕಿನ ಕೊಣಾಜೆಯ ಮುಚ್ಚಿಲ ಕೋಡಿ ನಿವಾಸಿ ದಿನೇಶ್ ಶೆಟ್ಟಿಗಾರ್ ಅವರ ಪುತ್ರ ವಿವೇಕ್ ಶೆಟ್ಟಿಗಾರ್ (32) ಮೃತ ಯುವಕನಾಗಿದ್ದಾನೆ.
ಮಂಗಳೂರಿನ ಕದ್ರಿಯ ವೇದ ಮೋಟಾರ್ಸ್ನಲ್ಲಿ ಉದ್ಯೋಗದಲ್ಲಿದ್ದ ವಿವೇಕ್ ಸೋಮವಾರ ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ತೆರಳಿದ್ದರು. ಅದೇ ದಿನ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತಾಯಿಗೆ ಕರೆ ಮಾಡಿ ದೇವಸ್ಥಾನಕ್ಕೆ ತೆರಳುವುದಾಗಿ ತಿಳಿಸಿದ್ದರೆಂದು ಹೇಳಲಾಗಿದೆ. ಮಧ್ಯರಾತ್ರಿ 12 ಗಂಟೆಯಾದರೂ ಮನೆಗೆ ವಾಪಸ್ಸು ಬರದ ಹಿನ್ನೆಲೆಯಲ್ಲಿ ತಾಯಿ ಕರೆ ಮಾಡಿದರೂ ವಿವೇಕ್ ಕರೆ ಸ್ವೀಕರಿಸಲಿಲ್ಲ.
ಮಂಗಳವಾರವೂ ಮನೆಗೆ ಬಾರದಿದ್ದು, ಮೊಬೈಲ್ ಕರೆಗಳನ್ನು ಸ್ವೀಕರಿಸದ ಕಾರಣ ಗಾಬರಿಗೊಂಡ ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಬಳಿಕ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇದರ ಮಧ್ಯೆ ಮಂಗಳವಾರ ಬೆಳಿಗ್ಗೆ ಸೋಮೇಶ್ವರ ಕಡಲತೀರದಲ್ಲಿ ವಿವೇಕ್ ಅವರ ದ್ವಿಚಕ್ರ ವಾಹನ ಮತ್ತು ಪಾದರಕ್ಷೆಗಳು ಪತ್ತೆಯಾಗಿದ್ದವು. ನಂತರ ಇಂದು ಬೆಳಿಗ್ಗೆ ಸೋಮೇಶ್ವರದ ಸೋಮನಾಥ ಕ್ಷೇತ್ರದ ಗದಾತೀರ್ಥ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತ ವಿವೇಕ್ ವಿವಾಹಿತನಾಗಿದ್ದು, ಪತ್ನಿ ಕೆಲ ದಿನಗಳ ಹಿಂದೆ ವಿಚ್ಛೇದನ ಪಡೆದು ಮತ್ತೊಮ್ಮೆ ಮದುವೆಯಾಗಿದ್ದಳು ಎನ್ನಲಾಗಿದೆ. ಈ ವಿಚಾರದಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತರು ತಂದೆ, ತಾಯಿ ಹಾಗೂ ಏಕೈಕ ಸಹೋದರಿಯನ್ನು ಅಗಲಿದ್ದಾರೆ. ಪ್ರಕರಣದ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದೆ.