ಪುತ್ತೂರು: ಪುತ್ತೂರಿನಲ್ಲಿ ನಿರ್ಮಾಣವಾಗಲಿರುವ ಮೆಡಿಕಲ್ ಕಾಲೇಜು ಯೋಜನೆಯ ಭಾಗವಾಗಿ ಸೇಡಿಯಾಪು ಪ್ರದೇಶದಲ್ಲಿಯೇ 300 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣವಾಗಲಿದೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಬಿಜೆಪಿ ನಾಯಕರು ಅನಗತ್ಯವಾಗಿ ವಿವಾದ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಆರೋಪಿಸಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇಡಿಯಾಪುವಿನಲ್ಲಿರುವ 40 ಎಕರೆ ಜಾಗದಲ್ಲಿ ಮೆಡಿಕಲ್ ಕಾಲೇಜು, 300 ಹಾಸಿಗೆಗಳ ಆಸ್ಪತ್ರೆ ಹಾಗೂ ಆಯುರ್ವೇದ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಒಂದೇ ಸ್ಥಳದಲ್ಲಿ ಇದ್ದರೆ ಹೆಚ್ಚಿನ ಪ್ರಯೋಜನವಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಮತ್ತು ಸರಕಾರಿ ಆಸ್ಪತ್ರೆ ಬೇರೆ ಬೇರೆ ಸ್ಥಳಗಳಲ್ಲಿ ಇರುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತಿವೆ ಎಂದು ಅವರು ಉದಾಹರಣೆ ನೀಡಿದರು.
ಈಗಿರುವ ಸರಕಾರಿ ಆಸ್ಪತ್ರೆಯ ಜಾಗದಲ್ಲಿ 300 ಹಾಸಿಗೆಗಳ ಆಸ್ಪತ್ರೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿಂದೆಯೇ ವರದಿ ನೀಡಿದೆ. ಅದು ಕೂಡ ಬಿಜೆಪಿ ಶಾಸಕರ ಅವಧಿಯಲ್ಲೇ ತಿಳಿಸಲಾಗಿತ್ತು. ಇದನ್ನೆಲ್ಲ ತಿಳಿದಿದ್ದರೂ ಬಿಜೆಪಿ ನಾಯಕರು ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಸೇಡಿಯಾಪು ಪ್ರದೇಶಕ್ಕೆ ಸಂಪರ್ಕದ ಸಮಸ್ಯೆಯೂ ಇಲ್ಲ. ಪುತ್ತೂರು–ಉಪ್ಪಿನಂಗಡಿ ಚತುಷ್ಪಥ ರಸ್ತೆ ಇರುವುದರಿಂದ ಸುಲಭವಾಗಿ ತಲುಪಬಹುದು. ಅಗತ್ಯವಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು.
ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಲು ಸಾಧ್ಯವಿಲ್ಲ ಎಂದು ಹಿಂದೆ ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ಶಾಸಕ ಅಶೋಕ್ ರೈ ಅವರು ಅದನ್ನು ಸಾಧ್ಯ ಮಾಡಿದ್ದಾರೆ. ಈಗ ಹೇಳಲು ಏನೂ ಇಲ್ಲದವರು ಅನಗತ್ಯವಾಗಿ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗದಲ್ಲೇ ಹಿಂದೆ ಬಿಜೆಪಿ ಶಾಸಕರು ಮೀನು ಕಾರ್ಖಾನೆ ಮಾಡಲು ಮುಂದಾಗಿದ್ದರು ಎಂಬುದನ್ನೂ ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ರವಿಪ್ರಸಾದ್ ಶೆಟ್ಟಿ, ಮೋನು ಬಪ್ಪಳಿಗೆ, ಲ್ಯಾನ್ಸಿ ಮಸ್ಕರೇನಸ್, ಸುಪ್ರೀತ್ ಕಣ್ಣರಾಯ ಮತ್ತು ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು.