ಪುತ್ತೂರು: ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಲ್ಲಾಡು–ಹೊಸಬೆಟ್ಟು ಪ್ರದೇಶಕ್ಕೆ ರಸ್ತೆ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಬೆಳ್ತಂಗಡಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಎಚ್ಚರಿಕೆ ನೀಡಿದರು.
ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮಂತಡ್ಕ–ದಿಡುಪೆ ರಸ್ತೆಯಲ್ಲಿ ಪೊಟ್ಟುಕೆರೆ ಎಂಬಲ್ಲಿಂದ ಕವಲೊಡೆದ ಕೊಲ್ಲಾಡು–ಹೊಸಬೆಟ್ಟು ರಸ್ತೆ ಸುಮಾರು 150 ವರ್ಷಗಳ ಹಿಂದಿನಿಂದಲೂ ಎತ್ತಿನಗಾಡಿ ಹೋಗುವ ದಾರಿಯಾಗಿತ್ತು ಎಂದು ತಿಳಿಸಿದರು. ಸ್ವಾತಂತ್ರ್ಯಕ್ಕೆ 78 ವರ್ಷವಾದರೂ ಈ ಪ್ರದೇಶಕ್ಕೆ ಸರಿಯಾದ ರಸ್ತೆ ನಿರ್ಮಾಣವಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಹೊಳೆ ಇರುವುದರಿಂದ ಮಳೆಗಾಲದಲ್ಲಿ ಜನರಿಗೆ ದಾಟಲು ಸಾಧ್ಯವಾಗದೆ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಇಲ್ಲಿ ಪರಿಶಿಷ್ಟ ಪಂಗಡ ಹಾಗೂ ಇತರ ಸಮುದಾಯಗಳ 20ಕ್ಕೂ ಹೆಚ್ಚು ಮನೆಗಳು ಇದ್ದು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
2012ರಲ್ಲಿ ಗ್ರಾಮಸ್ಥರು ಈ ಭಾಗಕ್ಕೆ ಶಾಶ್ವತ ರಸ್ತೆ ನಿರ್ಮಾಣ ಮಾಡುವಂತೆ ಸ್ಥಳೀಯ ಶಾಸಕರು ಮತ್ತು ಕಡಿರುದ್ಯಾವರ ಗ್ರಾಮ ಪಂಚಾಯತ್ಗೆ ಮನವಿ ಸಲ್ಲಿಸಿದ್ದರು. ನಂತರ ಗ್ರಾಮಸಭೆಯಲ್ಲಿಯೂ ಈ ಬೇಡಿಕೆ ಮಂಡಿಸಲಾಯಿತು. ಆದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಹೇಳಿದರು.
ಈ ವಿಷಯ ಗಮನಕ್ಕೆ ಬಂದ ಬಳಿಕ ಕಳೆದ ಡಿಸೆಂಬರ್ 16ರಂದು ಪುತ್ತೂರು ಸಹಾಯಕ ಆಯುಕ್ತರಿಗೆ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿದೆ. ಪರಿಶೀಲನೆ ಮಾಡುವುದಾಗಿ ಅವರು ಭರವಸೆ ನೀಡಿದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಗಿರಿಧರ ನಾಯ್ಕ ಹೇಳಿದರು.
ಪ್ರಸ್ತುತ ಈ ಭಾಗದ ಜನರು ಮುಖ್ಯ ರಸ್ತೆಗೆ ಬರಲು ಸುಮಾರು ಒಂದು ಕಿ.ಮೀ ದೂರ ನಡೆದು ಬರಬೇಕಾಗಿದೆ. ಮನೆಗೆ ಬೇಕಾದ ಸಾಮಾನುಗಳು ಮತ್ತು ಕೃಷಿ ಉತ್ಪನ್ನಗಳನ್ನು ಹೊತ್ತುಕೊಂಡೇ ಸಾಗಬೇಕಾದ ಪರಿಸ್ಥಿತಿ ಇದೆ. ಅನಾರೋಗ್ಯಪೀಡಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹ ಹೊತ್ತುಕೊಂಡೇ ಸಾಗಬೇಕಾದ ದುಸ್ಥಿತಿ ಉಂಟಾಗಿದೆ ಎಂದು ಅವರು ವಿವರಿಸಿದರು.
ರಸ್ತೆ ನಿರ್ಮಾಣಕ್ಕೆ ಬೇಕಾದ ಜಾಗದ ಒಂದು ಭಾಗಕ್ಕೆ ಖಾಸಗಿ ವ್ಯಕ್ತಿಯ ಆಕ್ಷೇಪವಿದೆ ಎಂಬ ಮಾಹಿತಿ ಇದೆ. ಆದರೆ ಉಳಿದ ಭಾಗದಲ್ಲಿ ರಸ್ತೆ ನಿರ್ಮಾಣ ಮಾಡುವುದಕ್ಕೂ, ಸೇತುವೆ ಕಟ್ಟುವುದಕ್ಕೂ ಸಾಧ್ಯವಿದೆ. ಆದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದೇ ಜನರನ್ನು ವಂಚಿಸಲಾಗಿದೆ ಎಂದು ಅವರು ಆರೋಪಿಸಿದರು.
ತಕ್ಷಣ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯರನ್ನು ಸೇರಿಸಿಕೊಂಡು ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಅಗತ್ಯವಿದ್ದರೆ ಆಹೋರಾತ್ರಿ ಧರಣಿ ಹಾಗೂ ಸಂಬಂಧಪಟ್ಟ ಇಲಾಖೆಯ ಕಚೇರಿ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಸ್ತೆ ಸಮಸ್ಯೆಯಿಂದ ಬಳಲುತ್ತಿರುವ ಶ್ರೀದೇವಿ ಹೊಸಬೆಟ್ಟು, ವಸಂತ ಗೌಡ ಹೊಸಬೆಟ್ಟು, ಸುನಂದ ಕಲ್ಲಬೆಟ್ಟು ಹಾಗೂ ಸ್ವರೂಪ್ ಹೊಸಬೆಟ್ಟು ಉಪಸ್ಥಿತರಿದ್ದರು.