ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಫ್ಲೈಓವರ್ನಿಂದ ಮುಂದೆ ದಾಸಕೋಡಿ ಮಾರ್ಗದ ಎಡಬದಿಯಲ್ಲಿ ಇರುವ ಕುದ್ರೆಬೆಟ್ಟು ಪ್ರದೇಶದಲ್ಲಿನ ಪ್ರಯಾಣಿಕರ ತಂಗುದಾಣವನ್ನು ಈಗ ಮರುನಿರ್ಮಾಣ ಮಾಡಲಾಗುತ್ತಿದೆ. ಸ್ಥಳೀಯರ ಮತ್ತು ಮಾಧ್ಯಮ ವರದಿಗಳಿಂದ ಎಚ್ಚೆತ್ತ ಸಂಬಂಧಿತ ಇಲಾಖೆ ಇದೀಗ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಅನುಕೂಲಕರ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಮುಂದಾಗಿದೆ.
ಈ ಹಿಂದೆ ಕುದ್ರೆಬೆಟ್ಟಿನಲ್ಲಿ ನಿರ್ಮಿಸಲಾಗಿದ್ದ ಪ್ರಯಾಣಿಕರ ತಂಗುದಾಣವು ಸರಿಯಾದ ರೀತಿಯಲ್ಲಿ ನಿರ್ಮಾಣವಾಗಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು. ಹೆಪ್ಪುಗಟ್ಟಿದ ಕೊಳಚೆ ನೀರು ಹರಿಯುವ ಚರಂಡಿಯ ಮೇಲೆಯೇ ಸ್ಲ್ಯಾಬ್ ಹಾಕಿ, ಅದರ ಮೇಲ್ಭಾಗದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಕಬ್ಬಿಣದ ಸರಳುಗಳಿಂದ ಸೀಟ್ ನಿರ್ಮಿಸಲಾಗಿತ್ತು. ಮೇಲ್ಭಾಗದಲ್ಲಿ ಸಣ್ಣ ತಗಡಿನ ಶೀಟ್ ಮಾತ್ರ ಇರಲಾಗಿತ್ತು. ಈ ಸ್ಥಳದ ಹತ್ತಿರವೇ ಶಾಲೆ ಮತ್ತು ವಸತಿಗೃಹಗಳಿರುವುದರಿಂದ, ಬಸ್ ಹತ್ತಲು ಬರುವ ವಿದ್ಯಾರ್ಥಿಗಳಿಗೆ ಅಪಾಯದ ಪರಿಸ್ಥಿತಿ ಉಂಟಾಗಿತ್ತು.
ಈ ವಿಷಯ ಬೆಳಕಿಗೆ ಬಂದ ನಂತರ ಇಲಾಖೆ ತಕ್ಷಣ ಕ್ರಮ ಕೈಗೊಂಡಿದ್ದು, ತಂಗುದಾಣವನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮರುನಿರ್ಮಾಣ ಕಾರ್ಯ ಕೈಗೊಂಡಿದೆ. ಈಗ ಪ್ರಯಾಣಿಕರು ಕುಳಿತುಕೊಳ್ಳುವ ಎತ್ತರದ ಸೀಟ್ನ ಕೆಳಭಾಗದಲ್ಲಿ ಮಣ್ಣು ಹಾಕಿ ಸಮತಟ್ಟು ಮಾಡಲಾಗುತ್ತಿದೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಕ್ಷತಾ ವ್ಯವಸ್ಥೆಗಳನ್ನು ಕಲ್ಪಿಸುವ ಕಾರ್ಯವೂ ನಡೆಯುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಈಗಾಗಲೇ ಸುಮಾರು 90 ಶೇಕಡಾ ಕೆಲಸ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ. ಇನ್ನೂ ಒಂದು ವಾರದಲ್ಲಿ ಸಂಪೂರ್ಣ ಕಾಮಗಾರಿ ಮುಗಿಯುವ ವಿಶ್ವಾಸವನ್ನು ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ವ್ಯಕ್ತಪಡಿಸಿದ್ದಾರೆ.
ಸ್ಥಳೀಯರು ಈ ಕಾರ್ಯವನ್ನು ಸ್ವಾಗತಿಸಿದ್ದು, ಶೀಘ್ರದಲ್ಲೇ ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಸುಸಜ್ಜಿತ ತಂಗುದಾಣ ಸಿಗಲಿದೆ ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.