ಬಿಲ್ ಪಾವತಿಸದ ಕಾರಣ ಕೊರಗ ಕುಟುಂಬಗಳ ನೀರು ಕಡಿತ: ಚೇಳ್ಯಾರು ಗ್ರಾ.ಪಂ ವಿರುದ್ಧ ಸಿಪಿಐಎಂ ಆಕ್ರೋಶ

ಮಂಗಳೂರು: ಮಂಗಳೂರಿನ ಚೇಳ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ದುರ್ಬಲವಾದ ಆರು ಕೊರಗ ಬುಡಕಟ್ಟು ಕುಟುಂಬಗಳ ಕುಡಿಯುವ ನೀರಿನ ಸಂಪರ್ಕವನ್ನು ಬಿಲ್ ಪಾವತಿಸದ ಕಾರಣಕ್ಕೆ ಕಡಿತಗೊಳಿಸಿರುವ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಗುರುವಾರ ಗ್ರಾಮ ಪಂಚಾಯತ್ ಅಧಿಕಾರಿಗಳು ಈ ಕುಟುಂಬಗಳ ಮನೆಗಳಿಗೆ ನೀಡಿದ್ದ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ಈ ಹಿಂದೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿತ್ತು. ಆದರೆ ಅದಾದ ಬಳಿಕ ಪಂಚಾಯತ್ ಆಡಳಿತ ಸೇಡು ತೀರಿಸುವ ರೀತಿಯಲ್ಲಿ ನಿರ್ದಯವಾಗಿ ವರ್ತಿಸಿದೆ ಎಂದು ಆರೋಪಿಸಲಾಗಿದೆ.

ಮನೆಗಳ ನೀರಿನ ಸಂಪರ್ಕ ಕಡಿತಗೊಂಡ ನಂತರ ಕೊರಗ ಕುಟುಂಬಗಳು ಕಾಲೋನಿಯಲ್ಲಿ ಇರುವ ಗ್ರಾಮ ಪಂಚಾಯತ್ ಸಾರ್ವಜನಿಕ ಕೊಳವೆಯಿಂದ ನೀರು ತುಂಬಿಸಿಕೊಂಡು ಮನೆಗಳಿಗೆ ಹೊತ್ತು ತರುತ್ತಿದ್ದರು. ಇದನ್ನು ಗಮನಿಸಿದ ಪಂಚಾಯತ್ ಆಡಳಿತ, ಅವರಿಗೆ ಅಲ್ಲಿ ಕೂಡ ನೀರು ಸಿಗದಂತೆ ಸಾರ್ವಜನಿಕ ಕೊಳವೆಯ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದೆ ಎಂದು ಹೇಳಲಾಗಿದೆ.

ಈ ಕ್ರಮದಿಂದ ಇದೀಗ ಆರು ಕುಟುಂಬಗಳಿಗೆ ಮನೆಗಳಲ್ಲಿಯೂ ನೀರು ಇಲ್ಲ, ಸಾರ್ವಜನಿಕ ಕೊಳವೆಯಿಂದಲೂ ನೀರು ದೊರೆಯದ ಪರಿಸ್ಥಿತಿ ನಿರ್ಮಾಣವಾಗಿದೆ. “ಹಣವಿಲ್ಲದಿದ್ದರೆ ಕುಡಿಯಲು ಹನಿ ನೀರು ಪಡೆಯುವ ಹಕ್ಕೂ ಇಲ್ಲ ಎಂಬಂತೆ ಪಂಚಾಯತ್ ವರ್ತಿಸಿದೆ” ಎಂದು ಆರೋಪಿಸಲಾಗಿದೆ.

ಅಳಿವಿನಂಚಿನಲ್ಲಿರುವ ಕೊರಗ ಬುಡಕಟ್ಟು ಸಮುದಾಯದೊಂದಿಗೆ ಈ ರೀತಿಯ ಅಮಾನವೀಯ ವರ್ತನೆ ಖಂಡನೀಯ ಎಂದು ಸಿಪಿಐಎಂ (CPI-M) ಪಕ್ಷ ತೀವ್ರವಾಗಿ ಖಂಡಿಸಿದೆ. ಈ ಕುರಿತು ಜಿಲ್ಲಾಡಳಿತದ ಮೌನ ಅಸಹನೀಯವಾಗಿದ್ದು, ತಕ್ಷಣವೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಇಲ್ಲವಾದಲ್ಲಿ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಿಪಿಐಎಂ ಎಚ್ಚರಿಕೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!