ಕುಂದಾಪುರ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಹಾಗೂ ಸುತ್ತಮುತ್ತಲಿನ ಗ್ರಾಮ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆಗಳ ಸಂಚರಣೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಉಡುಪಿ ವಿಭಾಗದ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಶುಕ್ರವಾರ (13-03-2026) ಬೆಳಿಗ್ಗೆ 11.30ಕ್ಕೆ ಮನವಿ ಸಲ್ಲಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಇನ್ನಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆಯಲ್ಲಿ ವಾಸಸ್ಥಾನಗಳ ಹತ್ತಿರ ಚಿರತೆ ಕಾಣಿಸಿಕೊಳ್ಳುತ್ತಿರುವ ಘಟನೆಗಳು ಹಲವು ಬಾರಿ ವರದಿಯಾಗಿವೆ ಎಂದು ತಿಳಿಸಿದರು.
ವಿಶೇಷವಾಗಿ ಇನ್ನಂಜೆ ಪಾಂಗಳ ಮಂಡೆಡಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಮನೆಗಳ ಆವರಣದಲ್ಲೇ ಸಾಕುಪ್ರಾಣಿ ನಾಯಿಗಳ ಮೇಲೆ ಚಿರತೆ ದಾಳಿ ನಡೆಸಿ ಕೊಂಡೊಯ್ಯುತ್ತಿರುವ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮಕ್ಕಳು ಹಾಗೂ ಹಿರಿಯರು ರಾತ್ರಿ ವೇಳೆ ಮನೆ ಹೊರಗೆ ಹೋಗಲು ಸಹ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಮಕ್ಕಳ ಸುರಕ್ಷತೆಯೂ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಅವರು ಹೇಳಿದರು.ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಚಿರತೆ ಸಂಚರಿಸುತ್ತಿರುವ ಪ್ರದೇಶಗಳಲ್ಲಿ ಬೋನು (ಕೇಜ್) ಅಳವಡಿಸಿ ಚಿರತೆಯನ್ನು ಹಿಡಿಯುವ ಕ್ರಮ ಕೈಗೊಳ್ಳಬೇಕು. ಜೊತೆಗೆ ರಾತ್ರಿ ವೇಳೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಿರಂತರ ಪಹರೆ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಗ್ರಾಮಸ್ಥರಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿಸುವ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಸಾಕುಪ್ರಾಣಿಗಳ ಮೇಲೆ ದಾಳಿ ನಡೆದಿದ್ದಲ್ಲಿ ತಕ್ಷಣ ಪರಿಹಾರಧನ ಮಂಜೂರು ಮಾಡಬೇಕು. ಚಿರತೆ ಸಂಚರಣೆ ಕಂಡುಬರುವ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಹಾಗೂ ಅಲಾರಂ ವ್ಯವಸ್ಥೆ ಅಳವಡಿಸಲು ಸರ್ಕಾರದಿಂದ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಜನವಸತಿ ಪ್ರದೇಶಗಳ ಸಮೀಪ ಚಿರತೆಗಳ ಓಡಾಟವನ್ನು ನಿಯಂತ್ರಿಸಲು ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತುಳುನಾಡ ರಕ್ಷಣಾ ವೇದಿಕೆ ವಿನಂತಿಸಿದೆ.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ವೈದರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಕಾಪು ಘಟಕ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕ ಅಧ್ಯಕ್ಷ ಕೃಷ್ಣನಂದ ನಾಯಕ್, ಕಾಪು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಮಹಿಳಾ ಗೌರವ ಅಧ್ಯಕ್ಷೆ ರೋಷನ್ ಬಳ್ಳಾಲ್, ಮುಖಂಡರಾದ ಶಶಿಕಲಾ ಶೆಟ್ಟಿ, ಹರಿಣಾಕ್ಷಿ ಉಚ್ಚಿಲ, ಜ್ಯೋತಿ ಆರ್ ಹಾಗೂ ಕಲಾವಿದರ ಘಟಕದ ಮುಖಂಡ ಮತ್ತು ಚಿತ್ರ ನಟ ರಣವೀರ್ ಕುಂದಾಪುರ ತುಳುನಾಡ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಹರೀಶ್ ಕೋಡಿ, ಜೀವನ ಖಾರ್ವಿ, ವಿನೋದ್ ಖಾರ್ವಿ, ನವೀನ್ ಖಾರ್ವಿ, ದಿನೇಶ್ ಯು. ಖಾರ್ವಿ, ದಿನೇಶ್ ಕೆ. ಖಾರ್ವಿ, ದೇವೇಂದ್ರ ಖಾರ್ವಿ, ಜಗನ್ನಾಥ ಖಾರ್ವಿ, ಕಳಸಿ, ರಾಘವೇಂದ್ರ ಖಾರ್ವಿ, ಗಣಪತಿ ಖಾರ್ವಿ, ಅಶೋಕ್ ಸಾರಂಗ, ಅಶೋಕ್ ಖಾರ್ವಿ, ಮನೋಜ್ ಜೋಗಿ, ರಾಜಾ ಖಾರ್ವಿ, ಎಚ್. ಖಾರ್ವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.