ಕಟಪಾಡಿಯಲ್ಲಿ ಮಗುಚಿ ಬಿದ್ದ ಎಲ್ಪಿಜಿ ಗ್ಯಾಸ್ ಟ್ಯಾಂಕರ್: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರ ಅಸ್ತವ್ಯಸ್ತ

ಉಡುಪಿ: ಉಡುಪಿ ಸಮೀಪದ ಕಟಪಾಡಿ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಎಲ್ಪಿಜಿ ಗ್ಯಾಸ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ.

ಹೆದ್ದಾರಿಯಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರದೇಶದಲ್ಲಿ ಟ್ಯಾಂಕರ್ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿ ಬಿದ್ದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಟ್ಯಾಂಕರ್‌ನಲ್ಲಿ ಗ್ಯಾಸ್ ಸೋರಿಕೆ ಆಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಿದರು. ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಟ್ಯಾಂಕರ್ ಮೇಲೆ ನೀರು ಹಾಯಿಸಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ಘಟನೆಯ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ನಿಯಂತ್ರಣದ ಕಾರ್ಯದಲ್ಲಿ ತೊಡಗಿದರು. ಬಳಿಕ ವಾಹನ ಸಂಚಾರವನ್ನು ನಿಧಾನವಾಗಿ ಸರಿಪಡಿಸಲಾಯಿತು.

ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲವೆಂದು ತಿಳಿದುಬಂದಿದೆ. ಟ್ಯಾಂಕರ್ ಮಗುಚಿ ಬಿದ್ದ ಹಿನ್ನೆಲೆ ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸ್ಥಳದಲ್ಲಿ ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!