ದುರಾಡಳಿತ, ಭ್ರಷ್ಟಾಚಾರ ಆರೋಪ: ಮಂಗಳೂರು ಪಾಲಿಕೆ ಎದುರು ಬಿಜೆಪಿ ಪ್ರತಿಭಟನೆ

ಮಂಗಳೂರು: Mangaluru City Corporation ನಲ್ಲಿ ದುರಾಡಳಿತ, ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳು ಜಾರಿಯಲ್ಲಿವೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಾಲಿಕೆ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಬಿಜೆಪಿ, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಮಂಡಲಗಳ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಆಕ್ರೋಶ ವ್ಯಕ್ತಪಡಿಸಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಜನರ ಸಮಸ್ಯೆಗಳಿಗೆ ಪಾಲಿಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮೇಯರ್ Premanand Shetty ಅವರು, ಕಳೆದ ಒಂದು ವರ್ಷದಿಂದ ಮಹಾನಗರ ಪಾಲಿಕೆಯ ಆಡಳಿತ ಅಧಿಕಾರಿಗಳ ಕೈಯಲ್ಲಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ದೂರಿದರು. ಜನರ ಯಾವುದೇ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ಅವರು ಹೇಳಿದರು.

ಸರಕಾರ ತಕ್ಷಣ ಪಾಲಿಕೆ ಚುನಾವಣೆಗೆ ಆದ್ಯತೆ ನೀಡಬೇಕು. ಚುನಾವಣೆ ನಡೆದರೆ ಆಡಳಿತ ಸುಗಮವಾಗುತ್ತದೆ ಎಂದು ಅವರು ಆಗ್ರಹಿಸಿದರು.

ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಇ-ಖಾತಾ ಸಮಸ್ಯೆಯಿಂದ ಜನತೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವೈಜ್ಞಾನಿಕ ತೆರಿಗೆ ಪದ್ಧತಿಯಿಂದ ಜನರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಪಾಲಿಕೆಯ ಅವ್ಯವಸ್ಥೆಯಿಂದಾಗಿ ಜನರು ಬೀದಿಗಿಳಿಯುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಆರೋಪಿಸಿದರು. ಚುನಾವಣೆ ನಡೆಸಿದರೆ ಹಿನ್ನಡೆಯಾಗಬಹುದು ಎಂಬ ಕಾರಣಕ್ಕೆ ಸರ್ಕಾರ ಹಿಂಜರಿಯುತ್ತಿದೆ ಎಂದೂ ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ಕೊಟ್ಟಾರಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿ, ಮಾಜಿ ಮೇಯರ್ ಮನೋಜ್ ಕುಮಾರ್ ಕೋಡಿಕಲ್ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.

ಇದೇ ವೇಳೆ ನಿತಿನ್ ಕುಮಾರ್, ದಿವಾಕರ ಪಾಂಡೇಶ್ವರ, ಜಯಾನಂದ ಅಂಚನ್, ರವಿಶಂಕರ ಮಿಜಾರು, ತಿಲಕ್ ರಾಜ್ ಕೃಷ್ಣಾಪುರ, ರಮೇಶ್ ಕಂಡೆಟ್ಟು, ನಂದನ್ ಮಲ್ಯ, ಸಂದೀಪ್ ಪಚ್ಚನಾಡಿ, ಶಕಿಲಾ ಕಾವಾ, ಪೂರ್ಣಿಮಾ ರಾವ್, ಅರುಣ್ ಜಿ ಶೇಟ್, ಜಗದೀಶ್ ಶೆಟ್ಟಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!